ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
home  Printer friendly Page home  Email this page
English Features
Month Year
  • ತೋಟಗಾರಿಕೆ ಇಲಾಖೆಯ ನೆರವು ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಬರದಲ್ಲೂ ಬಂಪರ್ ಕಲ್ಲಂಗಡಿ ಬೆಳೆ   14-March,2017
 
Department of Horticulture - Sericulture

ತೋಟಗಾರಿಕೆ ಇಲಾಖೆಯ ನೆರವು ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಬರದಲ್ಲೂ ಬಂಪರ್ ಕಲ್ಲಂಗಡಿ ಬೆಳೆ
ಕೊಪ್ಪಳ ಮಾ. 14 (ಕರ್ನಾಟಕ ವಾರ್ತೆ): ಇತ್ತೀಚಿನ ದಿನಗಳಲ್ಲಿ ರೈತರು ನಿರಂತರ ಹಣ ಒದಗಿಸುವಂತಹ ತೋಟಗಾರಿಕೆ ಬೆಳೆ ಬೆಳೆಯುವತ್ತ ಆಸಕ್ತಿ ತೋರುತ್ತಿದ್ದಾರೆ. ಪ್ರಧಾನ ಕೃಷಿ ಕೆಲಸದ ನಡುವೆ ತೋಟಗಾರಿಕೆ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಲು ಬಯಸುವವರೇ ಹೆಚ್ಚಾಗಿರುವವರ ನಡುವೆ ಕೊಪ್ಪಳ ತಾಲೂಕಿನ ರೈತರು ತೋಟಗಾರಿಕೆ ಇಲಾಖೆಯಿಂದ ಸಮಗ್ರ ತೊಟಗಾರಿಕೆ ಅಭಿವೃದ್ಧಿ ಯೋಜನೆ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೌಲಭ್ಯದೊಂದಿಗೆ, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಲ್ಲಂಗಡಿ ಬೆಳೆಯನ್ನು ಹನಿ ನೀರಾವರಿ ಪದ್ಧತಿಯ ಜೊತೆಗೆ ಇಸ್ರೇಲ್ ಮಾದರಿಯ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಖರ್ಚು ಕಡಿಮೆ, ಆದಾಯ ಹೆಚ್ಚು ಬರುವ ರೀತಿಯಲ್ಲಿ ಬರದ ನಡುವೆಯೂ ಬಂಪರ್ ಕಲ್ಲಂಗಡಿ ಬೆಳೆದು ಇತರೆ ರೈತರಿಗೆ ಮಾದರಿಯೆನಿಸಿದ್ದಾರೆ. ಬದುಕಿನ ಬಂಡಿ ಸಾಗಿಸಲು ಹತ್ತು ಹಲವು ದಾರಿಗಳಿವೆ. ಆದರೆ ಬೇಸಾಯವೆಂದರೆ ವೃಥಾ ಶ್ರಮವೆಂದು ಮೂಗು ಮುರಿಯುವ ಯುವಕರೇ ಇಂದಿನ ದಿನಮಾನಗಳಲ್ಲಿ ಹೆಚ್ಚು ಕಾಣಸಿಗುತ್ತಾರೆ. ಆದರೆ ಎಫ್-1 ಹೈಬ್ರಿಡ್ ತಳಿಯ ಕಲ್ಲಂಗಡಿ ಹಣ್ಣು ಬೆಳೆಯನ್ನು ಬೆಳೆದು ಲಕ್ಷ. ಲಕ್ಷ ರೂಪಾಯಿ ಭರಪೂರ ಆದಾಯ ಗಳಿಸುತ್ತಿರುವ ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಶಹಾಪುರ, ಬೇವಿನಹಳ್ಳಿ ಮತ್ತು ರುದ್ರಾಪುರ ಗ್ರಾಮದ ರೈತರು ಇತರರಿಗೆ ಮಾದರಿ ಎನಿಸಿದ್ದಾರೆ. ಈ ಯಶೋಗಾಥೆ ವರದಿ ಸಂಗ್ರಹಣೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪತ್ರಕರ್ತರಿಗೆ ಮಂಗಳವಾರದಂದು ವಿಶೇಷ ಮಾಧ್ಯಮ ಅಧ್ಯಯನ ಪ್ರವಾಸ ಏರ್ಪಡಿಸಲಾಗಿತ್ತು. ಕೊಪ್ಪಳ ಜಿಲ್ಲೆಯ ಮಣ್ಣಿನ ಗುಣವೇ ಅಂಥಾದ್ದು ಎನಿಸುತ್ತದೆ, ತೋಟಗಾರಿಕೆ ಬೆಳೆಗಳಿಗೆ ಕೊಪ್ಪಳ ಜಿಲ್ಲೆ ಸೂಕ್ತ ಹವಾಮಾನ, ವಾತಾವರಣ, ಮಣ್ಣಿನ ಗುಣಮಟ್ಟ ಪೂರಕವಾಗಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದು ಯಶಸ್ಸು ಕಂಡವರು ಬಹಳಷ್ಟು ರೈತರು. ಇಂಥ ಪರಿಸರದ ಲಾಭ ಹೊಂದಲು ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆಯು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರತಿ ತಾಲೂಕಿನಲ್ಲಿ ತಲಾ ಮೂರು ಗ್ರಾಮಗಳನ್ನು ಗುಚ್ಛ ಗ್ರಾಮಗಳಾಗಿ ಆಯ್ಕೆ ಮಾಡಿ, ಹೊಸ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದು, ಈ ಮೂಲಕ ರೈತರಿಗೆ ಉತ್ತೇಜನ ನೀಡುತ್ತಿದೆ. ಕೊಪ್ಪಳ ತಾಲೂಕಿನ ಶಹಾಪುರ, ಬೇವಿನಹಳ್ಳಿ ಮತ್ತು ರುದ್ರಾಪುರ ಗ್ರಾಮದ ಇಪ್ಪತ್ತೈದು ರೈತರ ಸುಮಾರು 50 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಸೊಗಸಾಗಿ ಬೆಳೆದಿರುವ ನೋಟ ಕಾಣಸಿಗುತ್ತದೆ. ಪ್ರತಿಯೊಂದು ಬಳ್ಳಿಯಲ್ಲೂ ಸುಮಾರು 08 ರಿಂದ 10 ಕೆ.ಜಿ ತೂಗುವ ದೊಡ್ಡ ದೊಡ್ಡ ಸೈಜಿನ ಕಲ್ಲಂಗಡಿ ನಳನಳಿಸುತ್ತಿದ್ದು, ಕಲ್ಲಂಗಡಿ ಹಣ್ಣು ಎಂದರೆ ಹೀಗಿರಬೇಕು ಎನಿಸುತ್ತದೆ. ಈ 50 ಎಕರೆ ಜಮೀನು ಒಬ್ಬ ರೈತನದ್ದಲ್ಲ. ಒಟ್ಟು 25 ಜನ ರೈತರು ಒಟ್ಟಾಗಿ ತಮ್ಮ ತಮ್ಮ ಹೊಲದಲ್ಲಿ ಒಂದೇ ತಳಿಯ ಕಲ್ಲಂಗಡಿ ಬೆಳೆದು, ಒಟ್ಟಾಗಿಯೇ ದುಡಿದು, ಲಕ್ಷ ಲಕ್ಷ ಆದಾಯ ಗಳಿಸಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಲ್ಲಿನ 50 ಎಕರೆ ಪ್ರದೇಶದಲ್ಲಿ ಟನ್ಗಟ್ಟಲೆ ಬೆಳೆದ ಕಲ್ಲಂಗಡಿ ಮಾರಾಟಕ್ಕೆ ಸಿದ್ಧವಾಗಿದ್ದು, ರೈತರು ಉತ್ತಮ ಲಾಭ ಗಳಿಸುತ್ತಿದ್ದಾರೆ. ಇತ್ತೀಚೆಗೆ ಶಿವರಾತ್ರಿ ಹಬ್ಬದ ಸೀಜನ್ ಇದ್ದುದ್ದರಿಂದ, ಕಲ್ಲಂಗಡಿ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿದ್ದು, ಎಲ್ಲ ರೈತರೂ ಲಕ್ಷ, ಲಕ್ಷ ಆದಾಯದ ಮಾತನ್ನಾಡುತ್ತಿದ್ದಾರೆ. ರೈತರ ಪರಿಶ್ರಮ : ಕೊಪ್ಪಳ ತಾಲೂಕಿನ ಶಹಾಪುರ, ಬೇವಿನಹಳ್ಳಿ ಮತ್ತು ರುದ್ರಾಪುರ ಗ್ರಾಮಗಳ ರೈತರಾದ ಅನ್ನವ್ವ ಮಡ್ಡಿ, ಕರಿಯಪ್ಪ ಕುರಿ, ಸಿದ್ದಪ್ಪ ಅಡಗಿ, ಮುಕ್ಕಣ್ಣ ಮಡ್ಡಿ, ಸೋಮಣ್ಣ ಬೆಟಗೇರಿ, ಮಲ್ಲಯ್ಯ ಹಿರೇಮಠ, ಭೀಮಪ್ಪ ಬಸರಿಹಾಳ, ಶಂಕ್ರಮ್ಮ ವಡಿಯರ್, ನಿಂಗಜ್ಜ, ರಾಮಪ್ಪ ಕುರಿ, ಮಾರ್ಕಂಡೆಪ್ಪ, ಮಾರುತಿ ಪೂಜಾರ್ ಸೇರಿದಂತೆ 25 ಜನ ರೈತರು ತಮ್ಮ ಒಟ್ಟು 50 ಎಕರೆ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ, ಸಹಕಾರ ಪಡೆದು, ಎಫ್-1 ಹೈಬ್ರಿಡ್ ತಳಿಯ ಕಲ್ಲಂಗಡಿ ಬೆಳೆಯಲು ನಿರ್ಧರಿಸಿದರು, ಪ್ರತಿ ಎಕರೆಗೆ ಸುಮಾರು 30 ಸಾವಿರ ರೂ. ವೆಚ್ಚವಾಗಿದ್ದು, ತೋಟಗಾರಿಕೆ ಇಲಾಖೆಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರತಿ ಎಕರೆಗೆ 17 ಸಾವಿರ ರೂ. ಸಹಾಯಧನ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶೇ. 90 ರಷ್ಟು ಸಬ್ಸಿಡಿ ಪಡೆದು, ಹನಿ ನೀರಾವರಿ ವ್ಯವಸ್ಥೆಯನ್ನು ಜಮೀನಿಗೆ ಅಳವಡಿಸಿಕೊಳ್ಳಲಾಯಿತು. ಹನಿ ನೀರಾವರಿ ಪದ್ಧತಿ ಅಳವಡಿಸಿದ್ದರಿಂದ, ನೀರು ಹಾಯಿಸುವ ಶ್ರಮವೂ ಬರಲಿಲ್ಲ. ತಂತ್ರಜ್ಞಾನ ಅಳವಡಿಕೆ, ಗೊಬ್ಬರ ಸೇರಿದಂತೆ ಬೇಸಾಯ ಕ್ರಮಗಳು ಹಾಗೂ ಗಿಡಗಳ ನಿರ್ವಹಣೆಗೆ ತೋಟಗಾರಿಕೆ ತಜ್ಞರ ಸಲಹೆ ಪಡೆದುಕೊಂಡು, ಕಲ್ಲಂಗಡಿ ಬಳ್ಳಿಯನ್ನು ಜೋಪಾನ ಮಾಡಲಾಯಿತು. ಎಲ್ಲರೂ ಶ್ರಮ ವಹಿಸಿ ದುಡಿದ ಪರಿಣಾಮವಾಗಿ ಬರ ಪರಿಸ್ಥಿತಿ ಹಾಗೂ ಅತ್ಯಲ್ಪ ನೀರಿನ ಲಭ್ಯತೆಯಲ್ಲೂ ಭರ್ಜರಿಯಾಗಿ ಕಲ್ಲಂಗಡಿ ಬೆಳೆ ಬಂದಿದೆ. ಏನಿದು ಹೊಸ ತಂತ್ರಜ್ಞಾನ ?: ಕಲ್ಲಂಗಡಿ ಬೆಳೆಯನ್ನು ಜಮೀನಿನಲ್ಲಿ ಸಾಮಾನ್ಯ ಕೃಷಿ ಹಾಗೂ ನೀರು ಜಮೀನಿಗೆ ಹಾಯಿಸುವ ಪದ್ಧತಿಯಲ್ಲಿ ಬೆಳೆಯುವುದನ್ನು ಕಾಣುತ್ತೇವೆ. ತೋಟಗಾರಿಕೆ ಇಲಾಖೆಯ ನೆರವು ಹಾಗೂ ಸಲಹೆಯಂತೆ ಇಸ್ರೇಲ್ ದೇಶದ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಇದರನ್ವಯ ಭೂಮಿಯನ್ನು ಹದಗೊಳಿಸಿದ ನಂತರ ಏರು ಮಡಿ ಮಾಡಿಕೊಳ್ಳಲಾಗುತ್ತದೆ. ನಂತರ ಹನಿ ನೀರಾವರಿಗಾಗಿ ಪೈಪ್ ಅಳವಡಿಕೆ ಮಾಡಿಕೊಂಡು, ಇದಕ್ಕೆ ಪ್ಲಾಸ್ಟಿಕ್ ಹೊದಿಕೆಯನ್ನು (ಮಲ್ಚ್) ಹಾಕಲಾಗುತ್ತದೆ. ನೀರು ಹಾಯಿಸುವ ಪದ್ದತಿಯಲ್ಲಿ 01 ಎಕರೆಗೆ ಬಳಕೆ ಮಾಡಬಹುದಾದ ನೀರನ್ನು, ಇಲ್ಲಿನ ಹನಿ ನೀರಾವರಿ ಪದ್ಧತಿಯಲ್ಲಿ 03 ಎಕರೆಗೆ ಬಳಸಬಹುದಾಗಿದೆ. ಪ್ಲಾಸ್ಟಿಕ್ ಹೊದಿಕೆ ಬಳಸುವುದರಿಂದ, ಕಳೆ ಕಡಿಮೆ, ಬಳ್ಳಿಗೆ ರೋಗಬಾಧೆ ತಗಲುವ ಭೀತಿಯೂ ಇಲ್ಲ. ಹನಿ ನೀರಾವರಿ ಇರುವುದರಿಂದ, ರಸಾವರಿ ಗೊಬ್ಬರಗಳ ಬಳಕೆ ಸುಲಭವಾಗಿದ್ದು, ಎಲ್ಲ ಗಿಡಗಳಿಗೂ ಸಮವಾಗಿ ಗೊಬ್ಬರ ಮತ್ತು ನೀರು ಲಭ್ಯವಾಗಲಿದೆ. ಇಲ್ಲಿ ಗೊಬ್ಬರವನ್ನು ಪ್ರತಿ ಗಿಡಕ್ಕೂ ಪ್ರತ್ಯೇಕವಾಗಿ ಹಾಕುವ ಅವಶ್ಯಕತೆ ಇಲ್ಲ. ಸಾಮಾನ್ಯ ಪದ್ಧತಿಯಲ್ಲಿ 01 ಎಕರೆಗೆ 04 ರಿಂದ 05 ಟನ್ ಕಲ್ಲಂಗಡಿ ಬರುವುದೂ ಕಷ್ಟದಾಯಕ. ಹೊಸ ತಂತ್ರಜ್ಞಾನದಲ್ಲಿ ಪ್ರತಿ ಎಕರೆಗೆ ಸುಮಾರು 10 ರಿಂದ 15 ಟನ್ ಕಲ್ಲಂಗಡಿ ಬೆಳೆ ಬರುತ್ತದೆ. ನೀರು ಮತ್ತು ವಿದ್ಯುತ್ ಸಮಸ್ಯೆ ಸಾಮಾನ್ಯವಾಗಿರುವ ಈ ಕಾಲದಲ್ಲಿ ಹೊಸ ಪದ್ಧತಿಯ ಅಳವಡಿಕೆ ನಿಜಕ್ಕೂ ರೈತರಿಗೆ ವರದಾನವಾಗಿದೆ. ಕಲ್ಲಂಗಡಿ ಲಾಭದಾಯಕವಾಗಿದ್ದು ಹೇಗೆ? : ಕಲ್ಲಂಗಡಿ ಬೆಳೆ 70 ದಿನಗಳ ಅವಧಿಯ ಬೆಳೆಯಾಗಿದ್ದು, 70 ದಿನಗಳ ಅವಧಿಯೊಳಗೆ ಹಣ್ಣು ನೀಡಲಿದೆ. ಅದರಂತೆ ಇಲ್ಲಿನ ರೈತರ ಜಮೀನು ಕಲ್ಲಂಗಡಿ ಹಣ್ಣುಗಳಿಂದ ತುಂಬಿದ್ದು, ಪ್ರತಿಯೊಂದು ಹಣ್ಣು ಸುಮಾರು 08 ರಿಂದ 10 ಕೆ.ಜಿ. ತೂಗುತ್ತಿವೆ. ಪ್ರತಿ ಎಕರೆಯಲ್ಲಿ ಸುಮಾರು 10 ರಿಂದ 15 ಟನ್ ಕಲ್ಲಂಗಡಿ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಟನ್ ಕಲ್ಲಂಗಡಿಗೆ ಕನಿಷ್ಟ 10 ಸಾವಿರ ರೂ. ದೊರೆಯುತ್ತದೆ. ಇನ್ನು ಹಬ್ಬದ ಸೀಸನ್ನಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. 1 ಎಕರೆಗೆ ಕನಿಷ್ಟವೆಂದರೂ 10 ರಿಂದ 15 ಟನ್ ಹಣ್ಣು ದೊರೆಯಲಿದೆ. ಅಂದರೆ ಎಕರೆಗೆ ಕನಿಷ್ಟ 01 ರಿಂದ 1. 5 ಲಕ್ಷ ರೂ. ಆದಾಯ ಗಳಿಸಬಹುದಾಗಿದೆ. ನೂತನ ತಂತ್ರಜ್ಞಾನ ಅಳವಡಿಸಿರುವುದರಿಂದ, ರೈತರಿಗೆ ಖರ್ಚಿನ ಬಾಬ್ತು ಅತ್ಯಲ್ಪವಾಗಿದ್ದು, ಹೆಚ್ಚಿನ ಆದಾಯ ಗಳಿಸಬಹುದಾಗಿದೆ ಎನ್ನುತ್ತಾರೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು. ಪ್ಲಾಸ್ಟಿಕ್ ಹೊದಿಕೆಯಿಂದಾಗಿ ಬೆಳೆಯು ಕಳೆ ನಿಯಂತ್ರಣವಾಗಿದ್ದು, ಹನಿ ನೀರಾವರಿ ಹಾಗೂ ರಸಾವರಿಯಿಂದಾಗಿ ನೀರಿನ ಸಮರ್ಪಕ ಬಳಕೆ ಮತ್ತು ಸಸ್ಯಗಳ ಸಮಗ್ರ ಪೋಷಣೆಯಿಂದಾಗಿ ಕೂಲಿ ಆಳಿನ ಖರ್ಚು ಸಹ ಕಡಿಮೆಯಾಗಿ, ಲಾಭದಾಯಕವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸುತ್ತಾರೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ವಿಸ್ತರಣೆಗೆ ಶೇ. 50 ರ ಸಹಾಯಧನ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹನಿ ನೀರಾವರಿ ವ್ಯವಸ್ಥೆಗೆ ಶೇ. 90 ರಷ್ಟು ಸಬ್ಸಿಡಿ ಸೌಲಭ್ಯ ದೊರೆಯಲಿದ್ದು, ಇಲಾಖೆ ನೀಡುವ ಸೌಲಭ್ಯವನ್ನು ರೈತರು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ಕಲ್ಲಂಗಡಿ ಹಣ್ಣು ಬೆಳೆಯುವ ಅನೇಕ ರೈತರ ನಡುವೆ, ತಾಂತ್ರಿಕತೆಯನ್ನು ಅಳವಡಿಸಿಕೊಂಡು, ತೋಟಗಾರಿಕೆಯನ್ನು ಲಾಭದಾಯಕವನ್ನಾಗಿಸಿಕೊಳ್ಳುವ ಮೂಲಕ ಉತ್ತಮ ಲಾಭ ಪಡೆಯುತ್ತಿರುವ ಇಲ್ಲಿನ ರೈತರು ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ ಎನ್ನುತ್ತಾರೆ ಕೊಪ್ಪಳದ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್ನ ಸಲಹಾಧಿಕಾರಿ ವಾಮನಮೂರ್ತಿ ಅವರು. ಮಾಹಿತಿಗೆ ವಾಮನಮೂರ್ತಿ-9482672039 ಕ್ಕೆ ಸಂಪರ್ಕಿಸಬಹುದು.
FEATURE ID 373
Untitled Page
Connect with us Twitter YouTube Face book Instagram