General13-September, 2017 17:37 IST
ಗಣಿಗಾರಿಕೆ, ಉತ್ಪಾದನೆ ಮತ್ತು ವಾಣಿಜ್ಯ ಪ್ರದರ್ಶನ ಸಮಾವೇಶ - ಸಂಜಯ್ ಕೆ. ಪಟ್ನಾಯಕ್
ಗಣಿಗಾರಿಕೆ ಉದ್ಯಮ ಮತ್ತು ಪ್ರದರ್ಶನ ಕುರಿತು ಮೈನಿಂಗ್ ಮಝ್ಮಾ-2017ರ 7ನೇ ಆವೃತ್ತಿಯನ್ನು ಇದೇ ತಿಂಗಳ 14, 15, 16 ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಫೆಡರೇಷನ್ ಆಫ್ ಇಂಡಿಯನ್ ಮಿನರಲ್ ಇಂಡಸ್ಟ್ರೀಸ್ ಅಧ್ಯಕ್ಷ ಸಂಜಯ್ ಕೆ. ಪಟ್ನಾಯಕ್ ತಿಳಿಸಿದರು. ಇಂದು ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಕೇಂದ್ರ ಗಣಿ ಸಚಿವಾಲಯ, ಫೆಡರೇಷನ್ ಆಫ್ ಇಂಡಿಯನ್ ಮಿನರಲ್ ಇಂಡಸ್ಟ್ರೀಸ್ ಮತ್ತು ಗಣಿಗಾರಿಕೆಯಲ್ಲಿ ಮುಂದುವರಿದ ದೇಶಗಳ ಸಹಭಾಗಿತ್ವದಲ್ಲಿ ನಡೆಯುವ ಸಮಾವೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಮ್ಮ ದೇಶದ ಜಿ.ಡಿ.ಪಿ. ಅಭಿವೃದ್ಧಿಯಾಗಲು ಖನಿಜ ಸಂಪತ್ತುಗಳ ರಫ್ತು ಹೆಚ್ಚಾಗಬೇಕು. ಆದರೆ ನಮ್ಮ ದೇಶದಲ್ಲಿ ಕೇವಲ ರಫ್ತಿನ ಪ್ರಮಾಣ 0.2%. ಆದರೆ ಕೆನಡಾ, ಆಸ್ಟ್ರೇಲಿಯಾ ಇತರ ಕೆಲವು ದೇಶಗಳ ರಫ್ತಿನ ಪ್ರಮಾಣ 13 ರಿಂದ 14 %. ಕಾರಣ ಭಾರತ ದೇಶದಲ್ಲಿ ತೆರಿಗೆ 69% ಇತರೆ ಗಣಿಗಾರಿಕೆಯಲ್ಲಿ ಮುಂದುವರೆದ ದೇಶಗಳ ತೆರಿಗೆ 30-40% ಇದೆ ಎಂದರು. ಗಣಿ ಕೈಗಾರಿಕೆಗಳಲ್ಲಿ ಮುಂದುವರೆದ ದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮತ್ತು ದೇಶದ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ, ಹಿಂದುಳಿದ ವರ್ಗದ ಮತ್ತು ಗಿರಿಜನ ಪ್ರದೇಶದ ಜನರಿಗೆ ಉದ್ಯೋಗಾವಕಾಶವನ್ನು ನೀಡಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿಗೊಳಿಸುತ್ತಿವೆ. ಅದೇ ರೀತಿ ಭಾರತದಲ್ಲೂ ಸಹಾ ಗಣಿ ಕೈಗಾರಿಕೆಯಲ್ಲಿ ಅಭಿವೃದ್ಧಿ ಆಗಬೇಕು ಎಂದು ತಿಳಿಸಿದರು. ಗಣಿ ಕೈಗಾರಿಕೆಗಳು ಹರಾಜಿನಲ್ಲಿ ಭಾಗವಹಿಸಲು ನಿರಾಸಕ್ತಿ ತೋರುತ್ತಿವೆ. ಕಾರಣ ಕೆಲವು ಕೈಗಾರಿಕಾ ಕಾಯ್ದೆಯ ನೀತಿ ನಿಯಮಗಳು ಕಠಿಣವಾಗಿವೆ. ಕೆಲವು ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಿ ಹತ್ತಾರು ವರ್ಷಗಳಿಂದ ಅದನ್ನು ವಾಪಸ್ಸು ಪಡೆಯಲು ಹರಸಾಹಸ ಪಡುತ್ತಿದ್ದಾರೆ ಎಂದರು. ಖನಿಜ ಸಂಪತ್ತುಗಳನ್ನು ಸರಿಯಾದ ರೀತಿ ರಫ್ತು ಮಾಡಿದರೆ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಾಗುತ್ತದೆ. ಹೆಚ್ಚು ಹೆಚ್ಚು ಜನರಿಗೆ ಉದ್ಯೋಗ ದೊರೆಯುತ್ತದೆ. ಆ ಉದ್ದೇಶಕ್ಕೋಸ್ಕರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸುಮಾರು 400 ಕೈಗಾರಿಕೋದ್ಯಮಿಗಳು 5000 ಮಂದಿ ಸಾರ್ವಜನಿಕರು ಈ ಪ್ರದರ್ಶನದಲ್ಲಿ ಭಾಗವಹಿಸುವರು ಎಂದರು. ಈ ಸಮಯದಲ್ಲಿ ಫೆಡರೇಷನ್ ಆಫ್ ಇಂಡಿಯನ್ ಮಿನರಲ್ ಇಂಡಸ್ಟ್ರೀಸ್ನ ಉಪಾಧ್ಯಕ್ಷ ಆರ್.ಕೆ. ಶರ್ಮ ಮತ್ತು ಕಾರ್ಯದರ್ಶಿ ಆರ್.ಎಲ್. ಮೊಹಂತಿ ಉಪಸ್ಥಿತರಿದ್ದರು.
(Release ID :1028)