Department of Education09-January, 2018 17:32 IST
ಶಿಕ್ಷಕರ ವರ್ಗಾವಣೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಡಿಸೆಂಬರ್-29, 2017 ರಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು, ಅರ್ಜಿಯನ್ನು ಸಲ್ಲಿಸಲು 10-01-2018 ರಂದು ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು. ಆದರೆ, ಹಲವಾರು ಶಿಕ್ಷಕರು ಮತ್ತು ಶಿಕ್ಷಣ ಸಂಘಟನೆಗಳು ಸಲ್ಲಿಸಿದ ಕೋರಿಕೆಯ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು 20-1-2018 ರವರೆಗೆ ಅವಕಾಶ ಮಾಡಿಕೊಡಲಾಗಿರುತ್ತದೆ. ಸದರಿ ಆನ್‍ಲೈನ್ ಅರ್ಜಿ ಸ್ವೀಕಾರದ ನಂತರ ದಾಖಲೆಗಳ ಪರಿಶೀಲನೆಗೆ ಒಂದು ತಿಂಗಳ ಕಾಲಾವಧಿಯ ಅವಶ್ಯಕತೆ ಇರುತ್ತದೆ. ಅಂದರೆ, ದಿನಾಂಕ 20-02-2018 ರವರೆಗೆ ದಾಖಲೆಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಂತರ ಕೌನ್ಸಿಲಿಂಗ್ ಕಾರ್ಯವನ್ನು ಮುಗಿಸಲು ಒಂದು ತಿಂಗಳ ಅವಶ್ಯಕತೆ ಇರುತ್ತದೆ. ಅಂದರೆ ಸಂಪೂರ್ಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ದಿನಾಂಕ 20-3-2018 ರವರೆಗೆ ಕಾಲಾವಕಾಶ ಬೇಕಾಗುತ್ತದೆ. ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಶಿಕ್ಷಣ ಸಮುದಾಯದ ಮತ್ತು ಶಿಕ್ಷಕರ ಕುಟುಂಬದ ಹಿತದೃಷ್ಟಿಯಿಂದ, ವರ್ಗಾವಣೆಗೊಳ್ಳುವ ಶಿಕ್ಷಕರನ್ನು ವರ್ಗಾವಣೆಗೊಂಡ ಸ್ಥಳಕ್ಕೆ ಜೂನ್-1, 2018 ರಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ನೀಡಲಾಗುವುದು. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದಿಲ್ಲ ಹಾಗೂ ಒಟ್ಟಾರೆ ವರ್ಗಾವಣೆ ಪ್ರಕ್ರಿಯೆನ್ನು ಏಪ್ರಿಲ್ -2018 ರೊಳಗೆ ಮುಗಿಸಿ, ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕಾರ್ಯಕ್ಕೆ ಯಾವುದೇ ರೀತಿಯಲ್ಲಿಯೂ ಅನಾನುಕೂಲವಾಗದ ರೀತಿಯಲ್ಲಿ ಹಾಗೂ ಶಿಕ್ಷಕರು ಮತ್ತು ಅವರ ಕುಟುಂಬದ ಹಿತರಕ್ಷಣೆಯಾಗುವ ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ತನ್ವೀರ್ ಸೇಠ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(Release ID :1376)