ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
General01-ಸೆಪ್ಟೆಂಬರ್, 2017 18:55 IST

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಫಲಾನುಭವಿಗಳ ಸಮಾವೇಶ- ಬಸವರಾಜ ರಾಯರಡ್ಡಿ
ಕೊಪ್ಪಳ ಸೆ. 01 (ಕರ್ನಾಟಕ ವಾರ್ತೆ) : ಇದೇ ಸೆ. 22 ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು. ಅಲ್ಲದೆ ಅಂದು ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳ ಬೃಹತ್ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು. ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಕಾರ್ಯಕ್ರಮ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳುವ ಸಲುವಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ವಸತಿ ಭಾಗ್ಯ, ವಿದ್ಯಾಸಿರಿ ಹೀಗೆ ಹತ್ತು ಹಲವು ಯೋಜನೆಗಳು ನಿಜಕ್ಕೂ ಜನರ ಮನ್ನಣೆಯನ್ನು ಗಳಿಸಿವೆ. ರೈತರು ಸತತ ಬರದಿಂದಾಗಿ ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಸಹಕಾರ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರ ಹಿತವನ್ನು ನಮ್ಮ ಸರ್ಕಾರ ಕಾಪಾಡಿದೆ. ಇವೆಲ್ಲಾ ಅಂಶಗಳು ಸರ್ಕಾರದ ಸಾಧನೆಯಾಗಿವೆ. ಸರ್ಕಾರದ ಯೋಜನೆಗಳ ಬಗ್ಗೆ ಈ ಹಿಂದೆ ವಾರ್ತಾ ಇಲಾಖೆ ಮೂಲಕ ಜನಮನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಯೋಜನೆಗಳನ್ನು ಉನ್ನತೀಕರಿಸಲಾಗಿದೆ. ಜನಮನ ಕಾರ್ಯಕ್ರಮದಲ್ಲಿ ಫಲಾನುಭವಿಗಳು, ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಕೊಡುತ್ತಿರುವ ಅಕ್ಕಿ ಪ್ರಮಾಣ ಸಾಲದು, ಬೇಳೆಯನ್ನೂ ನೀಡಿ, ಕ್ಷೀರಭಾಗ್ಯ ಯೋಜನೆಯಡಿ ಹಾಲನ್ನು ಇನ್ನಷ್ಟು ಹೆಚ್ಚು ದಿನ ನೀಡಿ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಹೀಗೆ ಜನರ ಅಭಿಪ್ರಾಯಗಳಿಗೆ ನಮ್ಮ ಸರ್ಕಾರ ಮನ್ನಣೆಯನ್ನು ನೀಡುವ ಮೂಲಕ ಅನ್ನಭಾಗ್ಯದಡಿ ಅಕ್ಕಿ ಪ್ರಮಾಣವನ್ನು ಹೆಚ್ಚಿಸಿ, ಬೇಳೆಯನ್ನೂ ನೀಡುತ್ತಿದೆ. ಕ್ಷೀರಭಾಗ್ಯದಡಿ ವಾರದ ಐದು ದಿನ ಹಾಲನ್ನು ಮಕ್ಕಳಿಗೆ ನೀಡುತ್ತಿದೆ. ಹೀಗೆ ಸರ್ಕಾರ ಯೋಜನೆಗಳ ಬಗ್ಗೆ ಫಲಾನುಭವಿಗಳ ಅಭಿಪ್ರಾಯವನ್ನು ಪಡೆಯುವ ಉದ್ದೇಶ ತಮ್ಮದಾಗಿದ್ದು, ಸೆ. 22 ರಂದು ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಸಂದರ್ಭದಲ್ಲಿ ಫಲಾನುಭವಿಗಳ ಸಮಾವೇಶವನ್ನೂ ಕೂಡ ಆಯೋಜಿಸಲಾಗುತ್ತಿದ್ದು, ಸುಮಾರು 01 ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಲಬುರಗಿಯಲ್ಲಿ ವಿಭಾಗ ಮಟ್ಟದ ಇಂತಹ ಬೃಹತ್ ಕಾರ್ಯಕ್ರಮವನ್ನು ಬರುವ ದಿನಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಅದಕ್ಕೂ ಮುನ್ನ, ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಒಟ್ಟಾರೆ ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಕಾರ್ಯಕ್ರಮವನ್ನು ಅರ್ಥಪೂರ್ಣವನ್ನಾಗಿಸಲು ಉದ್ದೇಶಿಸಲಾಗಿದೆ ಎಂದರು. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ : ಸೆ. 22 ರಂದು ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು. ಯಲಬುರ್ಗಾ ತಾಲೂಕು ತಳಕಲ್ನಲ್ಲಿ 108 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಗ್ರಾಮಗಳಿಗೆ 760 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ, ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ 110 ಕೋಟಿ ರೂ. ವೆಚ್ಚದಲ್ಲಿ ಆಲೂರು-ಬನ್ನಿಕೊಪ್ಪ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ, ಯಲಬುರ್ಗಾ ಮತ್ತು ಕೊಪ್ಪಳ ತಾಲೂಕುಗಳ ಆಯ್ದ ಕೆರೆಗಳನ್ನು 300 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ, ಕೊಪ್ಪಳದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಈಗಾಗಲೆ ನಿರ್ಮಾಣವಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡದ ಉದ್ಘಾಟನೆ, ಕಡೆಬಾಗಿಲು ಬಳಿ 32 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಂಡಿರುವ ಆನೆಗುಂದಿ ಸೇತುವೆಯ ಉದ್ಘಾಟನೆ, ಗಂಗಾವತಿಯಲ್ಲಿ 25 ಕೋಟಿ ರೂ. ವೆಚ್ಚದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದ ಉದ್ಘಾಟನೆ, ಗಂಗಾವತಿ ತಾಲೂಕು ಚಿಕ್ಕಬೆಣಕಲ್ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಿಸಿಎಂ ಹಾಸ್ಟೆಲ್ ಉದ್ಘಾಟನೆ. ಕೊಪ್ಪಳ ತಾಲೂಕು ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಹಿರೇಹಳ್ಳ ಯೋಜನೆ ಮುದ್ಲಾಪುರ ಗ್ರಾಮದ 10 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟನೆ, ಕುಕನೂರಿನಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ 60 ಹಾಸಿಗೆಗಳ ಮಹಿಳಾ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯ ಶಂಕುಸ್ಥಾಪನೆ ಸೇರಿದಂತೆ ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳು ನೆರವೇರಿಸುವರು ಎಂದು ಬಸವರಾಜ ರಾಯರಡ್ಡಿ ಹೇಳಿದರು. ಸಮಾರಂಭಕ್ಕೆ 20 ಸಚಿವರುಗಳು : ಸೆ. 22 ರಂದು ಕೊಪ್ಪಳದಲ್ಲಿ ಜರುಗಲಿರುವ ಮುಖ್ಯಮಂತ್ರಿಗಳ ಸಮಾರಂಭಕ್ಕೆ ರಾಜ್ಯದ ಸುಮಾರು 20 ಸಚಿವರುಗಳು ಭಾಗವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ರಮೇಶ್ ಕುಮಾರ್, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಕಾರ್ಮಿಕ ಸಚಿವ ಸಂತೋಷ್ ಲಾಡ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಆಹಾರ ಸಚಿವ ಯು.ಟಿ. ಖಾದರ್, ಕೃಷಿ ಸಚಿವ ಕೃಷ್ಣ ಭೈರೇಗೌಡ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜಯ್ಯ ಸೇರಿದಂತೆ ಹಲವು ಸಚಿವರುಗಳು, ಗಣ್ಯರು ಪಾಲ್ಗೊಳ್ಳುವರು ಎಂದು ಬಸವರಾಜ ರಾಯರಡ್ಡಿ ತಿಳಿಸಿದರು. ಫಲಾನುಭವಿಗಳನ್ನು ಕರೆತರಲು ವಾಹನ ವ್ಯವಸ್ಥೆಗೊಳಿಸಿ : ಸೆ. 22 ರಂದು ಜರುಗಲಿರುವ ಸಮಾರಂಭಕ್ಕೆ ಸರ್ಕಾರದ ಯೋಜನೆಗಳಾದ ಅನ್ನಭಾಗ್ಯ, ಕೃಷಿಭಾಗ್ಯ, ರೈತರ ಸಾಲ ಮನ್ನಾ, ಹೀಗೆ ಹಲವು ಯೋಜನೆಗಳ ಫಲಾನುಭವಿಗಳನ್ನು ಆಯಾ ಗ್ರಾಮಗಳಿಂದ ಕರೆತರಲು ಸೂಕ್ತ ವಾಹನದ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ವಾಹನಗಳ ಜೊತೆಗೆ ನೆರೆಹೊರೆಯ ಜಿಲ್ಲೆಗಳಾದ ಬಳ್ಳಾರಿ, ಗದಗ, ರಾಯಚೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದ ಟ್ರ್ಯಾಕ್ಸ್ ವಾಹನಗಳನ್ನು ಪಡೆಯಲು ಕ್ರಮ ವಹಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಫಲಾನುಭವಿಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಕರೆತಂದು, ಸುರಕ್ಷಿತವಾಗಿ ಹಿಂದಿರುಗುವ ವ್ಯವಸ್ಥೆಯನ್ನು ಆಯಾ ಗ್ರಾಮ ವ್ಯಾಪ್ತಿಯ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸಿಲ್ದಾರರು ಪಾಲ್ಗೊಂಡಿದ್ದರು.
(Release ID 579)