ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Health & Family Welfare11-ಸೆಪ್ಟೆಂಬರ್, 2017 17:32 IST

ಜನೆರಿಕ್ ಔಷಧಿ ಮಳಿಗೆಯಲ್ಲಿ ಬ್ರಾಂಡೆಡ್ ಔಷಧಿ ಮಾರಿದರೆ ಕಠಿಣ ಕ್ರಮ: ಆರೋಗ್ಯ ಸಚಿವ ರಮೇಶ ಕುಮಾರ್ ಎಚ್ಚರಿಕೆ
ಶಿವಮೊಗ್ಗ, ಸೆಪ್ಟಂಬರ್ 11 (ಕರ್ನಾಟಕ ವಾರ್ತೆ): ಜನಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ಔಷಧಿಗಳು ದೊರೆಯಲು ಅನುಕೂಲವಾಗುವಂತೆ ಆರಂಭಿಸಲಾಗಿರುವ ಜನೆರಿಕ್ ಔಷಧಿ ಮಳಿಗೆಗಳಲ್ಲಿ ಬ್ರಾಂಡೆಡ್ ಔಷಧಿಗಳನ್ನು ಮಾರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ ಕುಮಾರ್ ಅವರು ಎಚ್ಚರಿಕೆ ನೀಡಿದರು. ಅವರು ಸೋಮವಾರ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಿವಮೊಗ್ಗ, ಚಿಕಮಗಳೂರು, ಮಂಗಳೂರು, ಉಡುಪಿ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು. ಜನಸಂಜೀವಿನಿ ಜನೆರಿಕ್ ಮಳಿಗೆಗಳಲ್ಲಿ ಜನೆರಿಕ್ ಔಷಧಿಗಳ ಬದಲು ಬ್ರಾಂಡೆಡ್ ಔಷಧಿಗಳನ್ನು ಒತ್ತಾಯಪೂರ್ವಕವಾಗಿ ಮಾರುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇನ್ನು ಮುಂದೆ ಇಂತಹ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಮಾತ್ರವಲ್ಲದೆ ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮೇಲೆ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ವೈದ್ಯರ ನೇಮಕ: ಪ್ರತಿ ದಿನ 150ಕ್ಕಿಂತ ಹೆಚ್ಚಿನ ಹೊರರೋಗಿಗಳು ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿಯಾಗಿ ಒಬ್ಬರು ವೈದ್ಯರನ್ನು ನೀಡಲಾಗುವುದು. ಅಂತಹ ಕೇಂದ್ರಗಳನ್ನು 24x7 ಕೇಂದ್ರಗಳಾಗಿ ಪರಿವರ್ತಿಸಲು ಹಾಗೂ ತಾಯಿ ಮತ್ತು ಮಗು ಆಸ್ಪತ್ರೆಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 8ದಿನಗಳ ಒಳಗಾಗಿ ಅಂತಹ ಆಸ್ಪತ್ರೆಗಳ ವಿವರಗಳನ್ನು ಒದಗಿಸುವಂತೆ ಅವರು ಸೂಚನೆ ನೀಡಿದರು. ಮಂಗಳೂರಿಗೆ ಯಾಕೆ ಕಳುಹಿಸುತ್ತಾರೆ: ಮೆಗ್ಗಾನ್ನಂತಹ ಎಲ್ಲಾ ಸೌಲಭ್ಯಗಳು ಇರುವ ಆಸ್ಪತ್ರೆಯಿಂದಲೂ ವೈದ್ಯರು ರೋಗಿಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಿ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇಲ್ಲೇ ಎಲ್ಲಾ ಸೌಲಭ್ಯಗಳು ಇರುವಾಗ ಮಂಗಳೂರಿಗೆ ಕಳುಹಿಸುವ ಅಗತ್ಯವಾದರೂ ಏನು? ಸುತ್ತಮುತ್ತಲಿನ ಹಲವು ಜಿಲ್ಲೆಗಳಿಂದ ಮಂಗಳೂರಿಗೆ ರೋಗಿಗಳನ್ನು ಕಳುಹಿಸಲಾಗುತ್ತಿದ್ದು, ಇಲ್ಲಿಯೇ ಅಗತ್ಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು. ಈ ರೀತಿ ಶಿಫಾರಸು ಮಾಡಿದ ಕೆಲವು ನಿರ್ದಿಷ್ಟ ಪ್ರಕರಣಗಳ ಪರಿಶೀಲನೆ ನಡೆಸುವಂತೆ ಸಚಿವರು ವೆನ್ಲಾಕ್ ವೈದ್ಯಾಧಿಕಾರಿ ಅವರಿಗೆ ತಿಳಿಸಿದರು. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ: ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕಾಗಿ ಮಸೂದೆಯನ್ನು ಆದಷ್ಟು ಬೇಗನೆ ಅಂಗೀಕರಿಸಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಮಸೂದೆ ಕರಡು ಅಂತಿಮ ಹಂತದಲ್ಲಿದ್ದು, ಈ ವಾರದಲ್ಲಿ ಸದನ ಸಮಿತಿ ತನ್ನ ಅಂತಿಮ ಸಭೆಯನ್ನು ನಡೆಸಲಿದೆ. ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಮಿತಿಯು ಅಂತಿಮ ಸಭೆ ನಡೆಸಿದ ಬಳಿಕ ಸಭಾಪತಿ ಅವರನ್ನು ಭೇಟಿಯಾಗಿ, ಮಸೂದೆಯನ್ನು ಮಂಡಿಸಲು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯುವ ಕುರಿತು ಚರ್ಚಿಸಲಿದೆ ಎಂದು ಸಚಿವರು ತಿಳಿಸಿದರು. ನವೆಂಬರ್ ಒಳಗಾಗಿ ಡಯಾಲಿಸಿಸ್ ಘಟಕ ಆರಂಭ: ಎಲ್ಲಾ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ನವೆಂಬರ್ 1ರೊಳಗಾಗಿ ಡಯಾಲಿಸಿಸ್ ಘಟಕಗಳನ್ನು ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು, ಟೆಂಡರ್ ಅಂತಿಮಗೊಳಿಸಲಾಗಿದೆ. ಆದಷ್ಟು ಬೇಗನೇ ಕಾಮಗಾರಿ ಆರಂಭಿಸಿ ಡಯಾಲಿಸಿಸ್ ಘಟಕಗಳು ಆರಂಭವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬರುವ ಹಂದಿಗೋಡು ಕಾಯಿಲೆ ಪೀಡಿತರು ಎಂಡೋಸಲ್ಫಾನ್ ಪೀಡಿತರ ರೀತಿಯಲ್ಲಿ ಅಂಗ ವೈಕಲ್ಯಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಹಂದಿಗೋಡು ಕಾಯಿಲೆ ಪೀಡಿತರಿಗೂ ಸೂಕ್ತ ಪುನರ್ವಸತಿ ಕಲ್ಪಿಸಲು ಕ್ರಮಕೈಗೊಳ್ಳಬೇಕಾಗಿದೆ. ರೋಗ ಪೀಡಿತರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲು ಹೆಚ್ಚುವರಿಯಾಗಿ ಫಿಸಿಯೋ ಥೆರಪಿಸ್ಟ್ ನೇಮಕ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದರು. ಮಲೆನಾಡು ಪ್ರದೇಶಗಳಲ್ಲಿ ರೋಗಿಗಳನ್ನು ಆದಷ್ಟು ಬೇಗನೇ ಆಸ್ಪತ್ರೆಗಳಿಗೆ ಕರೆದೊಯ್ಯಲು ಸಾಧ್ಯವಾಗುವಂತೆ ಹೆಚ್ಚುವರಿಯಾಗಿ ಅಂಬುಲೆನ್ಸ್ ಒದಗಿಸಲಾಗುವುದು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಟ 10-15ಕಿಮಿ ವ್ಯಾಪ್ತಿಯೊಳಗೆ ಅಂಬುಲೆನ್ಸ್ ಲಭ್ಯವಿರುವಂತೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
(Release ID 583)