ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Revenue 12-ಸೆಪ್ಟೆಂಬರ್, 2017 17:44 IST

ಭರವಸೆಯ ಬೆಳಕಾದ `ಕಂದಾಯ ಗ್ರಂಥಾಲಯ’
ಕಾರವಾರ ಸೆ.12 (ಕರ್ನಾಟಕ ವಾರ್ತೆ): ಭಾರತದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ರಾಜ ಚಕ್ರಾಧಿಪತ್ಯದಲ್ಲೂ ಭೂಮಾಲಿಕತ್ವ ಬಹು ಪ್ರಮುಖ ವಿಷಯವಾಗಿರುತ್ತಿತ್ತು. ಯಾವುದೇ ರಾಜ್ಯ ಅಥವಾ ದೇಶದ ಪ್ರಮುಖ ವಿಷಯ ಭೂಸ್ವಾಧೀನ, ಭೂಮಾಲಿಕತ್ವ, ಭೂಒಡೆತನ, ಭೂಕಂದಾಯ ಅಥವಾ ಆ ಸಂಬಂಧಿತ ವಿವಾದಗಳು, ಯುದ್ಧಗಳು, ಸಂಬಂಧಗಳು, ವ್ಯಾಜ್ಯಗಳು ಸಾಮಾನ್ಯ. ಭೂಮಿಯ ನಿರ್ವಹಣೆಯೇ ಆ ದೇಶದ ಅಥವಾ ಆ ರಾಜ್ಯದ ಪ್ರಮುಖ ವಿಚಾರವಾಗಿರುತ್ತಿತ್ತು. ಅದಕ್ಕಾಗಿ ಆಗಿನಿಂದಲೂ ಶಾನುಭೋಗ, ಪಟೇಲ, ಗೌಡ ಎಂಬಿತ್ಯಾದಿ ಹೆಸರುಗಳಿಂದ ಭೂ ನಿರ್ವಹಣೆಯ ಪ್ರಮುಖ ವ್ಯಕ್ತಿಯನ್ನು ಕರೆಯಲಾಗುತ್ತಿತ್ತು. ಪ್ರಾಚೀನ ಕಾಲದ ಪ್ರಮುಖ ಎರಡು ಇಲಾಖೆಗಳೆಂದರೆ ಒಂದು ಭೂ ನಿರ್ವಹಣೆ ಸಂಬಂಧಿಸಿದ್ದು ಮತ್ತೊಂದು ಯುದ್ಧ ನಿರ್ವಹಣೆಗೆ ಸಂಬಂಧಿಸಿದ ಸೇನೆ ಆಗಿರುತ್ತಿತ್ತು. ಸ್ವಾತಂತ್ರ್ಯ ಭಾರತದಲ್ಲೂ ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದೇ ಕರೆಯಲಾಗುತ್ತದೆ. ಬಹುತೇಕ ಎಲ್ಲ ಇಲಾಖೆಗಳ ಮೂಲ ಕಂದಾಯ ಇಲಾಖೆಯೇ ಆಗಿದ್ದು ಗ್ರಾಮ ಮಟ್ಟದಲ್ಲಿ ಗ್ರಾಮ ಸಹಾಯಕರಿಂದ ಹಿಡಿದು ಆಡಳಿತದ ಕೇಂದ್ರಸ್ಥಾನದವರೆಗೆ ವಿವಿಧ ಹಂತದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಅಷ್ಟೇ ಅಲ್ಲದೆ ಬಹುತೇಕ ಎಲ್ಲ ಇಲಾಖೆಗಳಿಗೂ ಕಂದಾಯ ಇಲಾಖೆಯ ಕೊಂಡಿ ಒಂದಿಲ್ಲೊಂದು ವಿಷಯದಲ್ಲಿ ತಳುಕು ಹಾಕಿಕೊಂಡಿದೆ. ಆ ಕಾರಣದಿಂದಲೇ ಕಂದಾಯ ಇಲಾಖೆ ಮಾತೃ ಇಲಾಖೆಯಾಗಿದೆ. ಭೂಕಂದಾಯ, ಭೂಸುಧಾರಣೆ, ಭೂ ಮಂಜೂರಾತಿ, ಭೂಸ್ವಾಧೀನ, ಭೂಸ್ಥಳಾಂತರ, ಪುನರ್ವಸತಿ, ಪ್ರಕೃತಿ ವಿಕೋಪಗಳು ಮತ್ತು ಪರಿಹಾರ, ಸಾರ್ವಜನಿಕರ ಕುಂದುಕೊರತೆಗಳು, ನಾಗರಿಕರ ಸನ್ನದುಗಳು, ಜಾತಿ ಮತ್ತು ವರಮಾನ ದೃಢೀಕರಣ, ಭೂವ್ಯಾಜ್ಯಗಳು, ಭೂ ಮೋಜಿಣಿ, ದಾಖಲೆಗಳ ಸಂಗ್ರಹ. ಅದಲ್ಲದೆ, ಸಾಮಾಜಿಕ ಭದ್ರತೆ ಯೋಜನೆಗಳ ಅನುಷ್ಠಾನ, ಆಹಾರ ಭದ್ರತೆ ಸೇರಿದಂತೆ ಇನ್ನೂ ಹಲವಾರು ವಿಷಯಗಳು ಕಂದಾಯ ಇಲಾಖೆ ನಿರ್ವಹಣೆಯಲ್ಲಿವೆ. ಅಲ್ಲದೆ ಆನ್ಲೈನ್ ಸೇವೆಗಳಾದ ಭೂಮಿ, ನೆಮ್ಮದಿ ಸೇರಿದಂತೆ ವಿವಿಧ ಸೇವೆಗಳನ್ನೂ ಕಂದಾಯ ಇಲಾಖೆ ನಿರ್ವಹಣೆ ಮಾಡುತ್ತಿದೆ. ಈ ಎಲ್ಲ ಸೇವೆಗಳ ಅನುಷ್ಠಾನ ತಳಮಟ್ಟದ ಕಂದಾಯ ಅಧಿಕಾರಿಗಳಿಂದಲೇ ಆರಂಭವಾಗುತ್ತದೆ. ಗ್ರಾಮ ಲೆಕ್ಕಿಗರ ಬರಹವೇ ಮುಂದಿನ ಯಾವುದೇ ಯೋಜನೆಯ ಅನುಷ್ಠಾನ ಅಥವಾ ಪ್ರಮುಖ ತೀರ್ಮಾನಗಳಿಗೆ ಆಧಾರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ತಳಮಟ್ಟದ ಅಧಿಕಾರಿಗಳ ಕಾರ್ಯವೈಖರಿಯನ್ನು ಮತ್ತಷ್ಟು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಾನೂನಿನ ಜ್ಞಾನ ಮತ್ತು ಭೂಕಂದಾಯ ಸೇರಿದಂತೆ ವಿವಿಧ ವಿಷಯಗಳನ್ನು ನಿರ್ವಹಿಸುವ ಚಾಕಚಕ್ಯತೆ ಚುರುಕುಗೊಳಿಸುವ ವಿಷಯವನ್ನು ಗಮನದಲ್ಲಿರಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕ್ರಿಯಾಶೀಲ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ಕಂದಾಯ ಗ್ರಂಥಾಲಯಗಳನ್ನು ಆರಂಭಿಸಿದ್ದಾರೆ. ಇಲ್ಲಿ ತಳಮಟ್ಟದ ಕಂದಾಯ ಇಲಾಖೆ ಅಧಿಕಾರಿಗಳಿಗಾಗಿ ಭೂಕಂದಾಯ ಅಧಿನಿಯಮ, ಲೋಕಾಯುಕ್ತ ಕಾನೂನುಗಳ ಪುಸ್ತಕ, ಈ ಹಿಂದಿನ ಭೂವ್ಯಾಜ್ಯಗಳ ಡಿಕ್ರಿಗಳು ಸೇರಿದಂತೆ ವಿವಿಧ 100ಕ್ಕೂ ಹೆಚ್ಚು ಮಾಹಿತಿ ಪುಸ್ತಕಗಳು ಲಭ್ಯವಿದೆ. ಅಲ್ಲದೆ ಗ್ರಾಮಲೆಕ್ಕಾಧಿಕಾರಿಗಳಿಗೆ ಗಣಕಯಂತ್ರದ ತರಬೇತಿ ಹಾಗೂ ಅಂತರ್ಜಾಲದ ನಿರ್ವಹಣೆ ಹಾಗೂ ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಕಂದಾಯ ವ್ಯವಹಾರಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುತ್ತಿದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕಂದಾಯ ಗ್ರಂಥಾಲಯಗಳನ್ನು ತೆರೆಯಲಾಗಿದ್ದು ಗ್ರಾಮ ಲೆಕ್ಕಾಧಿಕಾರಿಗಳಿಂದ ಇನ್ನೂ ಹೆಚ್ಚಿನ ಪುಸ್ತಕಗಳ ಬೇಡಿಕೆ ಇದೆ. ಅವುಗಳನ್ನು ಸದ್ಯದಲ್ಲೇ ಪೂರೈಸಲಾಗುವುದು ಹಾಗೂ ತಳ ಮಟ್ಟದ ಅಧಿಕಾರಿಗಳು ಪ್ರಸ್ತುತ ಆಡಳಿತ ವ್ಯವಸ್ಥೆಗೆ ಒಗ್ಗಿಕೊಳ್ಳುವಂತೆ ಮಾಡಲು ಬೇಕಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್. ಹಿಂದಿನ ಕಡತಗಳನ್ನು ನೋಡಿ ತೀರ್ಮಾನ ತೆಗೆದುಕೊಳ್ಳುವ ಪರಿಪಾಠ ಸರ್ಕಾರಿ ವ್ಯವಸ್ಥೆಯಲ್ಲಿದೆ. ಆದರೆ ಕೆಲವೊಮ್ಮೆ ವಿವಿಧ ಕಾರಣಗಳಿಂದ ವ್ಯಾಜ್ಯಗಳನ್ನು ಎದುರಿಸುವ ಸಂದರ್ಭಗಳೂ ಇರುವುದರಿಂದ ಆರಂಭದಲ್ಲೇ ಉತ್ತಮ ನಿರ್ಧಾರ ಕೈಗೊಳ್ಳಲು ಕಾನೂನಿನ ಜ್ಞಾನ ನಮ್ಮೆಲ್ಲ ಗ್ರಾಮ ಲೆಕ್ಕಿಗರಿಗೆ ಅಗತ್ಯವಿದೆ. ಈ ನಿಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಕಂದಾಯ ಗ್ರಂಥಾಲಯಗಳನ್ನು ತೆರೆಯುವ ಮೂಲಕ ಇಲಾಖೆಯನ್ನು ಹಾಗೂ ನಮ್ಮನ್ನೂ ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಲು ಮುಂದಾಗಿರುವುದು ಸ್ವಾಗತಾರ್ಹ. ಈ ಗ್ರಂಥಾಲಯ ಅತ್ಯಂತ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ಅಂಕೋಲ ತಾಲೂಕು ಅರ್ವಾಡ ಗ್ರಾಮ ಲೆಕ್ಕಾಧಿಕಾರಿ ಮಹೇಶ್. ಬಬ್ರುವಾಡ ಗ್ರಾಮ ಲೆಕ್ಕಾಧಿಕಾರಿ ಡಿ.ಲಕ್ಷ್ಮೀದೇವಿ ಅವರು, ನಾನು ಇತ್ತೀಚಿಗಷ್ಟೆ ಕಂದಾಯ ಇಲಾಖೆ ಸೇವೆಗೆ ಸೇರ್ಪಡೆಯಾಗಿದ್ದು ಮೇಲಧಿಕಾರಿಗಳ ಸಲಹೆ ಪಡೆದ ಪ್ರತಿಯೊಂದು ಕೆಲಸಗಳನ್ನು ನಿರ್ವಹಿಸುತ್ತಿದ್ದೇನೆ. ಜನರೊಂದಿಗೆ ನೇರವಾಗಿ ವ್ಯವಹರಿಸುವುದರಿಂದ ಹಾಗೂ ನಮ್ಮ ಮೇಲಧಿಕಾರಿಗಳಿಗಿಂತಲೂ ನಮ್ಮ ಮೇಲೆಯೇ ಹೆಚ್ಚಿನ ಜವಾಬ್ದಾರಿ ಇರುವುದರಿಂದ ನಮಗೂ ಇಲಾಖೆಯ ಕಾನೂನಿನ ಅರಿವು ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಕಂದಾಯ ಗ್ರಂಥಾಲಯ ಅತ್ಯಂತ ಉಪಕಾರವಾಗಿದೆ ಎನ್ನುತ್ತಾರೆ. ಅಂಕೋಲ ತಾಲೂಕು ಶೆಟ್ಟಿಗೇರ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ಅವರು, ಕಂದಾಯ ಗ್ರಂಥಾಲಯ ಒಂದು ಉಪಯುಕ್ತ ಯೋಜನೆಯಾಗಿದ್ದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಅಭಿನಂದನೆಗಳು. ಇದನ್ನು ಪ್ರತಿ ಕಂದಾಯ ವೃತ್ತ ಮಟ್ಟದಲ್ಲಿ ಹಾಗೂ ನಾಡ ಕಚೇರಿಗಳ ಮಟ್ಟದಲ್ಲಿ ಆರಂಭಿಸುವ ಅಗತ್ಯವಿದೆ. ಈ ಗ್ರಂಥಾಲಯದಲ್ಲಿರುವ ಎಷ್ಟೋ ಉಪಯುಕ್ತ ಪುಸ್ತಕಗಳು ನಾಡಕಚೇರಿ ಮಟ್ಟದಲ್ಲಿ ಲಭ್ಯವಿರಬೇಕಿದೆ ಎನ್ನುತ್ತಾರೆ. ಅಂಕೋಲ ತಹಸೀಲ್ದಾರ್ ವಿವೇಕ್ ವಿ ಶೇಣ್ವಿ ಅವರು ಇತ್ತೀಚಿಗೆ ಕಂದಾಯ ಇಲಾಖೆಗೆ ಹೊಸಪೀಳಿಗೆಯ ಅಧಿಕಾರಿಗಳು ಸೇರ್ಪಡೆಯಾಗುತ್ತಿರುವುದರಿಂದ ಹಾಗೂ ಇಲಾಖೆ ಹೊಸ ಹೊಸ ಸವಾಲುಗಳನ್ನು ಎದುರಿಸುವ ಅನಿವಾರ್ಯತೆಗಳು ಇರುವುದರಿಂದ ಇಂತಹ ಕಾನೂನುಗಳ ಗ್ರಂಥಾಲಯದ ಅಗತ್ಯವಿತ್ತು. ಸದ್ಯದಲ್ಲೇ ಮತ್ತಷ್ಟು ಪುಸ್ತಕಗಳು ಈ ಗ್ರಂಥಾಲಯ ಸೇರಲಿವೆ ಎನ್ನುತ್ತಾರೆ. ಇತ್ತೀಚಿಗಷ್ಟೆ ಅರಣ್ಯ ಹಕ್ಕು ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಹೊಸ ತಂತ್ರಾಂಶವನ್ನು ಅಳವಡಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದ ಉತ್ತರ ಕನ್ನಡ ಜಿಲ್ಲೆ ಇದೀಗ ಕಂದಾಯ ಗ್ರಂಥಾಲಯ ಮೂಲಕ ಇಲಾಖೆಯನ್ನು ತಳಮಟ್ಟದಿಂದ ಬಲಿಷ್ಟಗೊಳಿಸುವ ಹೊಸ ಆಯಾಮಕ್ಕೆ ನಾಂದಿಯಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಒಟ್ಟಾರೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಹೊಸ ಪ್ರಯತ್ನ, ಹೊಸ ಆಲೋಚನೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುವ ಮೂಲಕ ರಾಜ್ಯದಲ್ಲಿ ಮಾದರಿ ಜಿಲ್ಲೆಯಾಗಿ ಉತ್ತರ ಕನ್ನಡ ಜಿಲ್ಲೆ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಷಯ.
(Release ID 586)