ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಛಾಯಾಚಿತ್ರ ಆಮಂತ್ರಣ ನುಡಿಚಿತ್ರ home Home
State Releases District Releases Photos Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • Department of Energy
  • ಇಂಧನ ಸಚಿವರಿಂದ ಪಾವಗಡ ಸೋಲಾರ್ಪಾರ್ಕ್ ಕಾಮಗಾರಿ ಪರಿಶೀಲನೆ  
  • General
  • ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ   
  • ಹೈಕ ಪ್ರದೇಶದಲ್ಲಿ 11 ರೆಸಿಡೆನ್ಸಿಯಲ್ ಕಾಲೇಜುಗಳು ಶೀಘ್ರ ಆರಂಭ; ರಾಯರೆಡ್ಡಿ  
  • ದಸರಾ ಕವಿಗೋಷ್ಠಿ ಪ್ರೊಮೊ ವೀಡಿಯೋ ಬಿಡುಗಡೆ  

 
General13-ಸೆಪ್ಟೆಂಬರ್, 2017 17:40 IST

ಶೌಚಾಲಯಕ್ಕಾಗಿ ಮಲ್ಲಮ್ಮನ ಹಾದಿ ಹಿಡಿದ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ದೇವರ ಮೇಲೆ ಆಣೆ, ಉಪವಾಸ ಮಾಡಿ, ಹಠ ಸಾಧನೆ
ಕೊಪ್ಪಳ, ಸೆ.13 (ಕರ್ನಾಟಕ ವಾರ್ತೆ): ಶೌಚಾಲಯಕ್ಕಾಗಿ ಉಪವಾಸ ಕುಳಿತು, ಶೌಚಾಲಯ ಕಟ್ಟಿಸಿಕೊಳ್ಳುವ ಮೂಲಕ ಜಿಲ್ಲೆಯ ಡಣಾಪುರದ ಮಲ್ಲಮ್ಮ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಳು. ಇದೀಗ ಶೌಚಾಲಯಕ್ಕಾಗಿ ದೇವರ ಮೇಲೆ ಮಾಡಿದ ಆಣೆ ಹಾಗೂ ಉಪವಾಸ ಮಾಡುವ ಮೂಲಕ ಕೊಪ್ಪಳ ತಾಲೂಕು ಕಾಮನೂರು ಗ್ರಾಮದ ಮೂವರು ವಿದ್ಯಾರ್ಥಿನಿಯರು ಶೌಚಾಲಯ ಕಟ್ಟಿಸುವ ಹಠ ಸಾಧಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಪಂಚಾಯತಿ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಮಿಷನ್ 200 ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನದ ಪ್ರಗತಿ ವರದಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತಾಲೂಕಿನ ಕಾಮನೂರ ಗ್ರಾಮಕ್ಕೆ ವಿಶೇಷ ಮಾಧ್ಯಮ ಪ್ರವಾಸ ಆಯೋಜಿಸಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ದೇವರ ಮೇಲೆ ಪ್ರಮಾಣ ಮತ್ತು ಉಪವಾಸ : ಕಾಮನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾರ್ಥನೆ ವೇಳೆ ಶಿಕ್ಷಕರು ಶೌಚಾಲಯ ಹೊಂದದೇ ಇರುವವರು ತಪ್ಪದೆ ಶೌಚಾಲಯ ನಿರ್ಮಾಣ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸುವ ಕಾರ್ಯ ನಡೆದಿದ್ದು, ಇದಕ್ಕಾಗಿ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರವೂ ನಡೆಯುತ್ತಿದೆ. ಈ ಪ್ರತಿಜ್ಞಾ ವಿಧಿ ಸ್ವೀಕಾರ ವೇಳೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವುದಾಗಿ ದುರ್ಗಾದೇವಿ ದೇವರ ಮೇಲೆ ಆಣೆ ಮಾಡಿದ್ದ 06 ನೇ ತರಗತಿ ವಿದ್ಯಾರ್ಥಿನಿ ಸಂಗೀತ ಸಿದ್ದಪ್ಪ ಸಂಗಟಿ, ಆಣೆ ತಪ್ಪುವುದು ಸರಿಯಲ್ಲ, ಶೌಚಾಲಯವನ್ನು ನಿರ್ಮಿಸಲೇ ಬೇಕು ಎಂದು ಪಾಲಕರಿಗೆ ನಿತ್ಯ ಒತ್ತಾಯಿಸಿದ್ದಾಳೆ. ಶೌಚಾಲಯಕ್ಕೆ ಜಾಗವಿಲ್ಲ ಎಂದು ಸಬೂಬು ಹೇಳುತ್ತಿದ್ದ ಪಾಲಕರು, ಕೊನೆಗೆ ಮನೆಯ ಮುಂಭಾಗದ ಕಟ್ಟೆಯನ್ನು ತೆರವುಗೊಳಿಸಿ, ಅಲ್ಲಿಯೇ ಶೌಚಾಲಯ ನಿರ್ಮಿಸಲು ಗುಂಡಿಯನ್ನು ತೋಡಿಸಿದ್ದಾರೆ. ಹೀಗೆ ಸಂಗೀತ ಶೌಚಾಲಯ ಕಟ್ಟಿಸಿಕೊಳ್ಳಬೇಕೆಂಬ ಹಠವನ್ನು ಸಾಧಿಸಿದ್ದಾಳೆ. 6 ನೇ ತರಗತಿಯ ಇನ್ನೋರ್ವ ವಿದ್ಯಾರ್ಥಿನಿ ವಿದ್ಯಾ ಹನುಮಪ್ಪ ಮತ್ತು 8 ನೇ ತರಗತಿ ವಿದ್ಯಾರ್ಥಿನಿ ಅಕ್ಷತಾ ಭರಮಪ್ಪ ಹುಳ್ಳಿ ಶೌಚಾಲಯಕ್ಕಾಗಿ ನಿತ್ಯ ನಾವು ಶಾಲೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿದ್ದೇವೆ. ದೇವರ ಮೇಲೆ ಪ್ರಮಾಣ ಮಾಡುತ್ತಿದ್ದೇವೆ. ಹೀಗಾಗಿ ಶೌಚಾಲಯ ಕಟ್ಟಿಸಿಕೊಳ್ಳದಿದ್ದರೆ, ಪ್ರತಿಜ್ಞೆಯನ್ನು ಉಲ್ಲಂಘಿಸಿದಂತಾಗಲಿದೆ ಎಂದು ಪಾಲಕರ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದ ಪಾಲಕರು, ಕೊನೆಗೆ ಶೌಚಾಲಯಕ್ಕಾಗಿ ವಿದ್ಯಾರ್ಥಿನಿಯರು ಎರಡು ದಿನ ಉಪವಾಸ ಕೈಗೊಂಡ ಬಳಿಕ, ಹಠಕ್ಕೆ ಮಣಿದು, ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ವಿದ್ಯಾರ್ಥಿನಿಯರ ಪಾಲಕರನ್ನು ವಿಚಾರಿಸಿದಾಗ, ಇವೆಲ್ಲ ಅಂಶಗಳು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಈ ವಿಷಯವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಲ್ಲದೆ ಶೌಚಾಲಯ ಪ್ರತಿಯೊಂದು ಕುಟುಂಬಕ್ಕೂ ಅಗತ್ಯವಾಗಿದ್ದು, ಮುಂದೆಯೂ ಶೌಚಾಲಯ ಜಾಗೃತಿಗಾಗಿ ಇತರೆ ವಿದ್ಯಾರ್ಥಿಗಳಲ್ಲಿಯೂ ಅರಿವು ಮೂಡಿಸಲು ಯತ್ನ ಮಾಡುವುದಾಗಿ ಹೇಳಿದರು. ಜಾಗೃತಿಯಲ್ಲಿ ಖ್ಯಾತಿ : ಕೊಪ್ಪಳ ಜಿಲ್ಲೆ ಶೌಚಾಲಯ ಜಾಗೃತಿಗಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಕರಣಗಳಿಗಾಗಿ ಗಮನ ಸೆಳೆದಿದೆ. ಶೌಚಾಲಯ ಕಟ್ಟಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ವಿವಿಧ ಜನಪ್ರತಿನಿಧಿಗಳು ಬಯಲು ಬಹಿರ್ದೆಸೆಗೆ ತೆರಳುವವರ ಕಾಲಿಗೆ ಬಿದ್ದು, ಮನವಿ ಮಾಡಿಕೊಂಡ ಪ್ರಕರಣಗಳು, ವಿಸಲ್ ಅಭಿಯಾನದ ಮೂಲಕ ನಸುಕಿನಲ್ಲಿ ಬಯಲು ಬಹಿರ್ದೆಸೆಗೆ ತೆರಳುವವರಿಗೆ ಜಾಗೃತಿ ಮೂಡಿಸಿದ್ದು, ಶೌಚಾಲಯಕ್ಕಾಗಿ ಮಲ್ಲಮ್ಮ ಎಂಬ ವಿದ್ಯಾರ್ಥಿನಿ ಉಪವಾಸ ಕುಳಿತು ಹಠ ಸಾಧಿಸಿದ್ದು, ಸುಮಾರು 10 ಸಾವಿರ ವಿದ್ಯಾರ್ಥಿಗಳಿಂದ ಬೃಹತ್ ಮಾನವ ಸರಪಳಿ ಹೀಗೆ ವಿವಿಧ ಬಗೆಯ ಜಾಗೃತಿಗಳಿಗೆ ಕೊಪ್ಪಳ ಜಿಲ್ಲೆ ರಾಜ್ಯವಷ್ಟೇ ಅಲ್ಲ ಇಡೀ ದೇಶದ ಗಮನ ಸೆಳೆದಿತ್ತು. ಜಿಲ್ಲೆಯ ಸಾಧನೆ ಕೇವಲ ಜಾಗೃತಿಗೆ ಮಾತ್ರ ಸೀಮಿತವಾಗದೆ, ಶೌಚಾಲಯ ನಿರ್ಮಾಣದಲ್ಲೂ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲು ಇನ್ನು 48 ಸಾವಿರ ಶೌಚಾಲಯಗಳ ನಿರ್ಮಾಣ ಬಾಕಿ ಇದೆ. ಸೆ.08 ರಿಂದ 16 ರವರೆಗೆ 200 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ 20,000 ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಜಿಲ್ಲೆಯಲ್ಲಿ ಮಿಷನ್ 200 ಅಭಿಯಾನ ಪ್ರಾರಂಭಿಸಲಾಗಿದ್ದು, ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಜನರು ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಅಭಿಯಾನಕ್ಕೆ ಸಾಥ್ ನೀಡುತ್ತಿದ್ದಾರೆ. ಲೇಬಗೇರಿ ಗ್ರಾಮ ಪಂಚಾಯತಿ ಸಾಧನೆ : ಲೇಬಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 1300 ಕುಟುಂಬಗಳಿದ್ದು, ಇದರಲ್ಲಿ 1110 ಕುಟುಂಬಗಳು ಈಗಾಗಲೆ ಶೌಚಾಲಯ ನಿರ್ಮಿಸಿಕೊಂಡಿವೆ. ಇನ್ನು 188 ಕುಟುಂಬಗಳು ಮಾತ್ರ ಶೌಚಾಲಯ ನಿರ್ಮಿಸಿಕೊಳ್ಳುವುದು ಬಾಕಿ ಇದ್ದು, ಮಿಷನ್ 200 ಅಭಿಯಾನದಲ್ಲಿ ಈ ಎಲ್ಲ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಿವೆ. ಈ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಗಾಪುರ ಗ್ರಾಮ ಈಗಾಗಲೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಘೋಷಿಸಲ್ಪಟ್ಟಿದೆ. ಕಾಮನೂರು ಮಾದರಿ ಗ್ರಾಮ : ಲೇಬಗೇರಿ ಗ್ರಾ.ಪಂ. ವ್ಯಾಪ್ತಿಯ ಕಾಮನೂರು ಗ್ರಾಮ 351 ಕುಟುಂಬಗಳನ್ನು ಹೊಂದಿದ್ದು, 194 ಕುಟುಂಬಗಳು ಶೌಚಾಲಯ ಹೊಂದಿವೆ. ಬಾಕಿ 157 ಕುಟುಂಬಗಳು ಸದ್ಯ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಿವೆ. ಅಲ್ಲದೆ ಈ ಗ್ರಾಮವು ಮದ್ಯಪಾನ ಮುಕ್ತ, ಗುಟಕಾ ಮುಕ್ತ, ತಂಬಾಕು ಮುಕ್ತ ಗ್ರಾಮವಾಗಿದ್ದು ಮಾದರಿ ಗ್ರಾಮ ಎನಿಸಿಕೊಂಡಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಮಿಷನ್ 200 ಅಭಿಯಾನ ಕೂಡ ಒಂದಾಗಿದ್ದು, ಇದರಲ್ಲಿ 200 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ 20 ಸಾವಿರ ಶೌಚಾಲಯ ನಿರ್ಮಿಸುವ ಗುರಿ ಇದೆ. ಈಗಾಗಲೆ ಜಿಲ್ಲೆಯಲ್ಲಿ ಮಿಷನ್ ಪ್ರಾರಂಭವಾದ ಬಳಿಕ ಈವರೆಗೆ ಸುಮಾರು 10 ಸಾವಿರ ಶೌಚಾಲಯ ನಿರ್ಮಾಣವಾಗಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳೂ, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸೆ. 16 ರೊಳಗೆ ಉಳಿದ 10 ಸಾವಿರ ಶೌಚಾಲಯ ನಿರ್ಮಾಣವಾಗುವ ಆಶಯ ಹೊಂದಲಾಗಿದ್ದು, ಮಿಷನ್ 200 ಯಶಸ್ವಿಗೊಳ್ಳುವ ವಿಶ್ವಾಸವಿದೆ ಎನ್ನುತ್ತಾರೆ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು. ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಲೇಬಗೇರಿ ಗ್ರಾಮ ಪಂಚಾಯತಿ ಪಿಡಿಒ ಅವರು ಈ ಸಂದರ್ಭದಲ್ಲಿ ಪಾಲ್ಗೊಂಡು, ಮಿಷನ್ 200 ಅಭಿಯಾನದ ಪ್ರಗತಿ ವೀಕ್ಷಣೆ ಮಾಡಿದರು.
(Release ID 588)