ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Water Resources23-ನವೆಂಬರ್, 2017 17:31 IST

ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಉಪ ಸಮಿತಿ ವರದಿ ಆಧರಿಸಿ ಹೆಚ್ಚಿನ ಪರಿಹಾರ :ಸಚಿವ ಎಂ.ಬಿ.ಪಾಟೀಲ್
ಸುವರ್ಣ ವಿಧಾನಸೌಧ ಬೆಳಗಾವಿ(ಕರ್ನಾಟಕ ವಾರ್ತೆ) ನ.23: ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗÀಡೆ ಪ್ರದೇಶದ ನಿರಾಶ್ರಿತರಿಗೆ ಹೆಚ್ಚಿನ ಪರಿಹಾರ ನೀಡುವ ಸಂಬಂಧಿಸಿದಂತೆ ರಚಿಸಲಾಗಿರುವ ಸಂಪುಟ ಉಪ ಸಮಿತಿ ಮುಂದಿನ ತಿಂಗಳು ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಮುಳುಗಡೆ ಗ್ರಾಮಗಳಿಗೆ ಭೇಟಿ ನೀಡಲಿದ್ದು, ಈ ಕುರಿತಾಗಿ ಸರ್ಕಾರಕ್ಕೆ ಸಲ್ಲಿಸುವ ವರದಿ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿಧಾನಸಭೆಯಲ್ಲಿ ತಿಳಿಸಿದರು. ಗುರುವಾರ ನಿಯಮ 69ರಡಿ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ಮುಳುಗಡೆಯಾಗಲಿರುವ ಗ್ರಾಮಗಳು ಹಾಗೂ ಈಗಾಗಲೇ ಪುನರ್ವಸತಿ ಕಲ್ಪಿಸಿರುವ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸುವ ಕುರಿತ ಚರ್ಚೆಗೆ ಅವರು ಉತ್ತರಿಸಿದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ಮುಂದಿನ ತಿಂಗಳ 4 ಮತ್ತು 5ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ವರದಿ ನೀಡಲಿದೆ. ಸಂಪುಟ ಉಪ ಸಮಿತಿಯ ವರದಿಯನ್ನು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ಉನ್ನತಾಧಿಕಾರ ಸಮಿತಿ ಪರಾಮರ್ಶಿಸಿ ಅಗತ್ಯ ಪರಿಹಾರವನ್ನು ಪ್ರಕಟಿಸಲಿದೆ. 2013ರಲ್ಲಿ ಜಾರಿಗೆ ಬಂದಿರುವ ನೂತನ ಭೂಸ್ವಾಧೀನ ಕಾಯ್ದೆಯನ್ವಯ ಭೂಮೌಲ್ಯಕ್ಕಿಂತ ನಾಲ್ಕುಪಟ್ಟು ಹೆಚ್ಚಿನ ಪರಿಹಾರ ಒದಗಿಸುವ ಅವಕಾಶವಿದೆ. ಆದರೆ ಭೂ ಮೌಲ್ಯ ಹಳ್ಳಿಹಳ್ಳಿಗೂ ವ್ಯತ್ಯಾಸವಿರುವ ಕಾರಣ ನಾಲ್ಕುಪಟ್ಟು ಪರಿಹಾರ ಒದಗಿಸಿದರೂ ರೈತರಿಗೆ ಸೂಕ್ತ ನ್ಯಾಯ ಒದಗಿಸುವುದು ಕಷ್ಟವಾಗಿದೆ. ಈ ತೊಡಕು ನಿವಾರಣೆಗೆ ಮುಖ್ಯಮಂತ್ರಿಯವರು ಸಂಪುಟ ಉಪ ಸಮಿತಿ ರಚಿಸಿ ಫಲಾನುಭವಿಗಳ ಜೀವನ ಸುಧಾರಣೆ ಜತೆಗೆ ಕುಟುಂಬದ ಆರ್ಥಿಕ ನಿರ್ವಹಣೆ ಮಾಡಲು ಸಹಕಾರಿಯಾಗುವ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದರು. ಕೇಂದ್ರ ಸರ್ಕಾರ ಕೃಷ್ಟಾ ಮೇಲ್ದಂಡೆ ಯೋಜನೆ ಐತೀರ್ಪಿನ ಅಧಿಸೂಚನೆ ಹೊರಡಿಸುವ ಮೊದಲೇ ರಾಜ್ಯ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಭೂಸ್ವಾಧೀನ ಹಾಗೂ ಇತರೆ ಕಾಮಗಾರಿಗೆ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಅಧಿಸೂಚನೆವರೆಗೂ ಕಾಯ್ದಿದ್ದರೆ ನೀರಾವರಿ ಯೋಜನೆಗಳ ಕಾರ್ಯಾರಂಭ ಇನ್ನೂ 10 ವರ್ಷಗಳಷ್ಟು ವಿಳಂಬ ಆಗುತ್ತಿತ್ತು. ಕಳೆದ ನಾಲ್ಕು ವರ್ಷದಲ್ಲಿ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಮೊದಲ ಮತ್ತು ಎರಡನೇ ಹಂತದ ಯೋಜನೆ ಅನುಷ್ಟಾನಕ್ಕೆ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ 450ಕೋಟಿ ರೂ.ಗಳಷ್ಟು ಅಗತ್ಯವಿದ್ದು, ಈಗಾಗಲೇ 192ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಮುಳುಗಡೆ ಗ್ರಾಮಗಳಿಗೆ ಪರಿಹಾರ ಮತ್ತು ಪುನರ್ ವಸತಿಗಾಗಿ 600ರಿಂದ 700 ಕೋಟಿ ರೂ.ಗಳಷ್ಟು ಹಣ ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಹೇಳಿದರು. ಕೃಷ್ಣಾ ಮೇಲ್ದಂಡೆ ಮೊದಲ ಹಂತದ ಯೋಜನೆಗೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಕಡಿಮೆ ಪರಿಹಾರ ದೊರಕಿದೆ. ಭೂಮಿಯೂ ಇಲ್ಲದೆ, ಉದ್ಯೋಗವೂ ಇಲ್ಲದೆ ಬಾಗಲಕೋಟೆ ಪಟ್ಟಣದಲ್ಲಿ ಹಮಾಲಿ ಮಾಡುವ ಪರಿಸ್ಥಿತಿಯಿದೆ. ಬಾಗಲಕೋಟೆಯಲ್ಲಿ ಉದ್ಯೋಗವಕಾಶಗಳ ಸೃಷ್ಟಿಗೆ ಸರ್ಕಾರ ತಕ್ಷಣ ಮುಂದಾಗಬೇಕು. ಎಸ್ಸಿ/ಎಸ್ಟಿ ಮೀಸಲಾತಿ ಮಾದರಿಯಲ್ಲಿ ಮುಳುಗಡೆ ಸಂತ್ರಸ್ತರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸಬೇಕು. ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವ ಉದ್ಯಮಿಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು. ಪುನರ್ ವಸತಿ ಸಂದರ್ಭದಲ್ಲಿ ಕನಿಷ್ಟ ಎರಡು ಗುಂಟೆ ನಿವೇಶನ ನೀಡಬೇಕು ಎಂದು ನಿರ್ಣಯದ ಮೇಲೆ ಮಾತನಾಡಿದ ಶಾಸಕರಾದ ಜೆ.ಟಿ.ಪಾಟೀಲ, ಸಿದ್ದು ನ್ಯಾಮೆಗೌಡ, ಅಪ್ಪಾಜಿ ನಾಡಗೌಡ, ಗೋವಿಂದ ಕಾರಜೋಳ, ಎಚ್.ವೈ.ಮೇಟಿ ಹಾಗೂ ವಿಜಯಾನಂದ ಕಾಶಪ್ಪನವರ್ ಒತ್ತಾಯಿಸಿದರು.
(Release ID 618)