ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
General04-ಜನವರಿ, 2018 17:44 IST

ಗ್ರಾಮಗಳಿಗೂ ಯೋಜನಾಬದ್ಧ ಬಡಾವಣೆಗಳ ನಿರ್ಮಾಣ ಅಗತ್ಯವಿದೆ- ಬಸವರಾಜ ರಾಯರಡ್ಡಿ
ಕೊಪ್ಪಳ ಜ. 04 (ಕರ್ನಾಟಕ ವಾರ್ತೆ): ನಗರಗಳಲ್ಲಿ ನಿರ್ಮಾಣವಾಗುತ್ತಿರುವ ರೀತಿಯಲ್ಲಿ ಗ್ರಾಮಗಳಲ್ಲೂ ಯೋಜನಾಬದ್ಧ ಬಡಾವಣೆಗಳ ನಿರ್ಮಾಣ ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಭಿಪ್ರಾಯಪಟ್ಟರು. ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನಗರಗಳಿಗೆ ಮಾತ್ರ ಸೀಮಿತವಿರುವ ನಗರಾಭಿವೃದ್ಧಿ ಪ್ರಾಧಿಕಾರದ ರಚನೆಯ ಮಾದರಿ ಇದೀಗ, ಗ್ರಾಮಗಳ ಅಭಿವೃದ್ಧಿಯ ಉದ್ದೇಶಕ್ಕೆ ಗ್ರಾಮಗಳಿಗೂ ಅಗತ್ಯವಾಗಿದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ, ಯೋಜನಾಬದ್ಧ ಕಾಲೋನಿಗಳ ನಿರ್ಮಾಣ ವ್ಯವಸ್ಥೆ ಗ್ರಾಮಗಳಿಗೂ ಅಗತ್ಯವಾಗಿದೆ. ಇದರಿಂದ ನೆಮ್ಮದಿಯ ಬದುಕು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಯೋಜನಾ ಬದ್ಧ ಬಡಾವಣೆಗಳ ಅಗತ್ಯ ಗ್ರಾಮಗಳಿಗೂ ಬೇಕಾಗಿದೆ. ಪ್ರತಿ ವರ್ಷ ದೇಶದಲ್ಲಿ ನಗರೀಕರಣ ಹೆಚ್ಚಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿನ ಜನ ಉದ್ಯೋಗ, ಶಿಕ್ಷಣ, ವ್ಯವಹಾರಗಳಿಗಾಗಿ ನಗರಕ್ಕೆ ವಲಸೆ ಹೋಗುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ನಗರಗಳಲ್ಲಿನ ಜನಸಂಖ್ಯೆಯ ಪ್ರಮಾಣ ದೇಶದ ಒಟ್ಟು ಜನಸಂಖ್ಯೆಯ ಶೇ. 11 ರಷ್ಟು ಮಾತ್ರ ಇತ್ತು. ಸ್ವಾತಂತ್ರ್ಯಾ ನಂತರ ಪಂಚವಾರ್ಷಿಕ ಯೋಜನೆಗಳು, ನೀರಾವರಿ, ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳಲ್ಲಿ ಆದ ತ್ವರಿತಗತಿಯ ಅಭಿವೃದ್ಧಿಯಿಂದಾಗಿ ಜನ ನಗರಗಳಿಗೆ ಹೆಚ್ಚು ವಲಸೆ ಹೋಗುವಂತಾಯಿತು. 2011 ರಲ್ಲಿ ನಗರದ ಜನಸಂಖ್ಯೆಯ ಪ್ರಮಾಣ ಶೇ. 35 ರಷ್ಟಾಗಿದ್ದರೆ, ಈಗಿನ ಪ್ರಮಾಣ ಸುಮಾರು ಶೇ. 40 ರಷ್ಟು ಆಗಿದ್ದು, ಗ್ರಾಮೀಣ ಪ್ರದೇಶದ ಜನಸಂಖ್ಯೆ ಶೇ. 60 ರಷ್ಟಾಗಿದೆ. ಸೌಲಭ್ಯಗಳು, ಶಿಕ್ಷಣ, ವ್ಯವಹಾರಿಕ ದೃಷ್ಟಿಯಿಂದ ಹಾಗೂ ಜೀವನ ಶೈಲಿಯಲ್ಲಿ ಉಂಟಾದ ಬದಲಾವಣೆಯ ಕಾರಣಗಳಿಂದ ಜನರು ನಗರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸರ್ಕಾರ ನಗರಗಳಲ್ಲಿ ಯೋಜನಾಬದ್ಧ ಬಡಾವಣೆಗಳ ನಿರ್ಮಾಣಕ್ಕೆ ರಸ್ತೆ, ವಿದ್ಯುತ್, ಒಳಚರಂಡಿ, ಸಾರ್ವಜನಿಕ ಬಳಕೆ ಹಾಗೂ ಉದ್ಯಾನವನ ಇವೆಲ್ಲವನ್ನೂ ಕಡ್ಡಾಯಗೊಳಿಸಿ, ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಜನರಿಗೆ ಒಳ್ಳೆಯ ಗುಣಮಟ್ಟದ ಜೀವನ ದೊರಕಬೇಕೆನ್ನುವುದು ಸರ್ಕಾರದ ಆಶಯವಾಗಿದ್ದು, ನಗರಗಳಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವುದು, ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಲು ಪ್ರೋತ್ಸಾಹಿಸಬೇಕಿದೆ ಎಂದು ಬಸವರಾಜ ರಾಯರಡ್ಡಿ ಅವರು ಹೇಳಿದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೊಪ್ಪಳದಲ್ಲಿ 3. 90 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಾಲಯ ನಿರ್ಮಾಣವಾಗಿರುವುದು ಶ್ಲಾಘನೀಯ ಸಾಧನೆಯಾಗಿದೆ. ಪ್ರಾಧಿಕಾರದ ವತಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ನಗರದ ಗಡಿಯಾರ ಕಂಬದ ನವೀಕರಣ ಹಾಗೂ ವೃತ್ತದ ಅಭಿವೃದ್ಧಿಗೆ ಈಗಾಗಲೆ ಯೋಜನೆ ಸಿದ್ಧವಾಗಿದ್ದು, ಶೀಘ್ರ ಕಾರ್ಯಾರಂಭ ಆಗಲಿದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಧಿಕಾರದ ಕಚೇರಿ ಹಾಗೂ ವಾಣಿಜ್ಯ ಮಳಿಗೆಯನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಕೊಪ್ಪಳವು ಜಿಲ್ಲಾ ಕೇಂದ್ರವಾದ ಬಳಿಕ ಬೆಳವಣಿಗೆಯ ವೇಗ ಹೆಚ್ಚಾಗಿದೆ. ಪ್ರಾಧಿಕಾರದಿಂದ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಬಾಡಿಗೆ ದರವನ್ನು ಶೀಘ್ರ ನಿಗದಿಪಡಿಸಿ, ನಿಯಮಾನುಸಾರ ವಿತರಣೆ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಎಪಿಎಂಸಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
(Release ID 642)