ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Transport 10-ಜನವರಿ, 2018 17:18 IST

ರಾಜ್ಯದ ಸಾರಿಗೆ ಸಂಸ್ಥೆ ಜನಸ್ನೇಹಿ ಮತ್ತು ಜನಸೇವೆಯ ಸಂಸ್ಥೆಯಾಗಿದೆ- ಹೆಚ್.ಎಂ. ರೇವಣ್ಣ
ಕೊಪ್ಪಳ ಜ. 10 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೇವಲ ಲಾಭವನ್ನಷ್ಟೇ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿಲ್ಲ. ಸಾರಿಗೆ ಸಂಪರ್ಕ ಸೇವೆ ಎಲ್ಲರಿಗೂ ದೊರೆಯುವಂತೆ ಮಾಡಲು ಜನಸ್ನೇಹಿ ಹಾಗೂ ಜನಸೇವೆಯ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿದೆ ಎಂದು ರಾಜ್ಯ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಹೇಳಿದರು. ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣ ಆವರಣದಲ್ಲಿ ಮಂಗಳವಾರ ರಾತ್ರಿ ಬಸ್ ಡಿಪೋ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ, ಅಪರಾಧ ಮತ್ತು ಅಪಘಾತ ರಹಿತ ಚಾಲನೆ ಮಾಡಿದ ಏಳು ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಹಾಗೂ ಬಸ್ ದಿನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇಡೀ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ಸೇವೆ ಒದಗಿಸುವ ಸಂಸ್ಥೆಯಾಗಿದೆ. ರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯು ಒಮನ್ ದೇಶದೊಂದಿಗೆ ಎರಡನೆ ಸ್ಥಾನವನ್ನು ಹಂಚಿಕೊಂಡಿದೆ. ಸಾರಿಗೆ ಸೇವೆಯಯನ್ನು ಎಲ್ಲ ನಾಗರೀಕರಿಗೆ, ಗ್ರಾಮೀಣರಿಗೆ ತಲುಪಿಸಬೇಕು ಎನ್ನುವುದು ಸಂಸ್ಥೆಯು ಆಶಯವಾಗಿದ್ದು, ಕೇವಲ ಲಾಭವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಾಚರಣೆ ಮಾಡುತ್ತಿಲ್ಲ. ರಸ್ತೆ ಸಂಪರ್ಕ ಇರುವ ಎಲ್ಲ ಗ್ರಾಮಗಳಿಗೂ ಬಸ್ ಸೇವೆಯನ್ನು ಒದಗಿಸುತ್ತಿದ್ದೇವೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈವರೆಗೆ ಈ.ಕ.ಸಾ.ಸಂಸ್ಥೆಗೆ 2130 ಹೊಸ ಬಸ್ಗಳನ್ನು ಸೇರ್ಪಡೆ ಮಾಡಲಾಗಿದೆ. ಅನೇಕ ವರ್ಷಗಳಿಂದ ಕಗ್ಗಂಟಾಗಿದ್ದ ಅಂತರ ನಿಗಮ ವರ್ಗಾವಣೆಯನ್ನು ಸುಗಮಗೊಳಿಸಲು ನೀತಿ ರೂಪಿಸಲಾಗಿದ್ದು, ಈಗಾಗಲೆ ವರ್ಗಾವಣೆ ಬಯಸಿ 14 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅರ್ಹವಿರುವ 3957 ಸಿಬ್ಬಂದಿಗಳ ವರ್ಗಾವಣೆಗೆ ಪ್ರಕ್ರಿಯೆ ಪ್ರಾರಂಭಿಸಿದ್ದು, ಶೀಘ್ರದಲ್ಲಿಯೇ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನೌಕರರ ಹಿತದೃಷ್ಟಿಯಿಂದ ಶೇ. 12. 50 ರಷ್ಟು ಬೋನಸ್ ಹೆಚ್ಚಿಸಲಾಗಿದೆ. ಈ ಮೂಲಕ ನಮ್ಮ ಸರ್ಕಾರ ಸಾರಿಗೆ ಸಂಸ್ಥೆಯನ್ನು ಕಾರ್ಮಿಕ ಸ್ನೇಹಿಯನ್ನಾಗಿಸಲು ಕ್ರಮ ವಹಿಸಿದೆ. ಸಾರಿಗೆ ಸಂಸ್ಥೆಯಲ್ಲಿ ನಮ್ಮ ಸರ್ಕಾರ 24900 ಸಿಬ್ಬಂದಿಗಳನ್ನು ನೇರ ನೇಮಕಾತಿ ಮೂಲಕ ಪಾರದರ್ಶಕವಾಗಿ ಹುದ್ದೆಗಳ ಭರ್ತಿ ಮಾಡಿದೆ. ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ 4815 ಹುದ್ದೆಗಳನ್ನು ನೇರ ನೇಮಕ ಮೂಲಕ ಭರ್ತಿ ಮಾಡಲಾಗಿದೆ. ಬಸ್ ನಿಲ್ದಾಣ ಹಾಗೂ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯವನ್ನು ಉತ್ತಮ ಪಡಿಸಲು ಸರ್ಕಾರ ಆದ್ಯತೆ ನೀಡುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ ಹೊಸ ಬಸ್ಗಳ ಸೇರ್ಪಡೆ ಹೆಚ್ಚಾಗಿದ್ದು, ಹೆಚ್ಚುವರಿಯಾಗಿರುವ ಬಸ್ಗಳನ್ನು ಯಾತ್ರಾ ಸ್ಥಳಗಳಿಗೆ ಹಾಗೂ ಬೇಡಿಕೆಗೆ ಅನುಗುಣವಾಗಿ ಮಾರ್ಗಗಳಿಗೆ ಬಸ್ ಸಂಚಾರ ಪ್ರಾರಂಭಿಸಲಾಗುವುದು. ಅಂತರ ರಾಜ್ಯ ಬಸ್ ಸಂಚಾರವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಈಗಾಗಲೆ ತೆಲಂಗಾಣ, ಕೇರಳ, ಮಹಾರಾಷ್ಟ್ರ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ, ಬಸ್ ಸಂಚಾರ ಸೌಲಭ್ಯವನ್ನು ಹೆಚ್ಚಿಸಲಾಗಿದೆ. ತಮಿಳುನಾಡು ರಾಜ್ಯದೊಂದಿಗೆ ಶೀಘ್ರದಲ್ಲಿಯೇ ಚರ್ಚಿಸಿ, ಬಸ್ ಸೌಕರ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಹೇಳಿದರು. 250 ಹೊಸ ಬಸ್ ಸೇರ್ಪಡೆ : ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಯನ್ನು ಮಾಡಿದೆ. ಕೊಪ್ಪಳ ಜಿಲ್ಲೆಗೆ ಈವರೆಗೆ 250 ಕ್ಕೂ ಹೆಚ್ಚು ನೂತನ ಬಸ್ಗಳನ್ನು ಒದಗಿಸಿದ್ದು, ಕೊಪ್ಪಳ ಕ್ಷೇತ್ರಕ್ಕೆ 52 ಹೊಸ ಬಸ್ಗಳನ್ನು ಒದಗಿಸಿದೆ. ಕೊಪ್ಪಳದಲ್ಲಿದ ಹಳೆಯ ಡಿಪೋ ಅನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಇದೀಗ ತಾನೆ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಬಸ್ಪಾಸ್ ನೀಡುವ ವ್ಯವಸ್ಥೆಯಲ್ಲಿಯೂ ಸುಧಾರಣೆ ಮಾಡಲಾಗಿದೆ.ಹೈದ್ರಾಬಾದ್, ಮುಂಬೈಗೆ ಹೈಟೆಕ್ ಸ್ಲೀಪರ್ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ನಗರ ಸಾರಿಗೆ ಸಂಪರ್ಕವನ್ನು ಪ್ರಾರಂಭಿಸಿ, ಸೇವೆ ಒದಗಿಸಲಾಗುತ್ತಿದೆ. ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣವನ್ನು ಜಿಂದಾಲ್ ಕಂಪನಿಯ ಸಹಕಾರದಲ್ಲಿ ಸುಸಜ್ಜಿತಗೊಳಿಸಿ, ಉತ್ತಮ ಸ್ವಚ್ಛ ನಿಲ್ದಾಣವಾಗಿಸಲು ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. 50 ಕೋಟಿ ರೂ. ಗಳಿಕೆ : ಈ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಸ್. ಅಶೋಕಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಿಗಮದ ವ್ಯಾಪ್ತಿಯಲ್ಲಿ ಸದ್ಯ 4500 ಬಸ್ಗಳಿದ್ದು, 21 ಸಾವಿರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 9 ವಿಭಾಗಗಳು ಹಾಗೂ 50 ಡಿಪೋಗಳಿವೆ. ನಿತ್ಯ 14 ಲಕ್ಷ ಜನ ನಮ್ಮ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಸಂಸ್ಥೆಯ ವಾರ್ಷಿಕ ಗಳಿಕೆ 5 ಕೋಟಿ ರೂ. ಇತ್ತು. ಈ ವರ್ಷ 50 ಕೋಟಿ ರೂ. ಮೊತ್ತವನ್ನು ದಾಟಿದೆ. ಮೂಲಭೂತ ಸೌಕರ್ಯ ಉತ್ತಮಗೊಳಿಸಲು ಸರ್ಕಾರ 18 ಕೋಟಿ ರೂ. ಅನುದಾನವನ್ನು ನಿಗಮಕ್ಕೆ ನೀಡಿದೆ ಎಂದರು. 07 ಚಾಲಕರಿಗೆ ಬೆಳ್ಳಿ ಪದಕ : ಕಳೆದ ಐದು ವರ್ಷಗಳ ಅವಧಿಯಲ್ಲಿ ಅಪರಾಧ ಹಾಗೂ ಅಪಘಾತ ರಹಿತ ಚಾಲನೆ ಮಾಡಿ ಉತ್ತಮ ಸೇವೆ ಸಲ್ಲಿಸಿರುವ 07 ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಿ, ಗೌರವಿಸಲಾಯಿತು. ಕೊಪ್ಪಳ ಘಟಕದ ಎಂ.ಡಿ. ಶಬ್ಬೀರ್, ಆರ್.ಜಿ. ದಫೇದಾರ, ಹೆಚ್.ಎಂ. ಪಾಟೀಲ್, ಕುಷ್ಟಗಿ ಘಟಕದ ಸೋಮಶೇಖರ, ಸದಾಶಿವ, ಸುಭಾನಸಾಬ ಹಾಗೂ ಗಂಗಾವತಿ ಘಟಕದ ಮೆಹಬೂಬ ಸಾಬ್ ಇವರೇ ಉತ್ತಮ ಚಾಲನಾ ಕರ್ತವ್ಯ ನಿರ್ವಹಿಸಿ ಬೆಳ್ಳಿ ಪದಕ ಪ್ರಶಸ್ತಿ ಪಡೆದವರು. ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಸಾರಿಗೆ ಸಂಸ್ಥೆ ನಿರ್ದೇಶಕ ನೀಲಕಂಠಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಎಪಿಎಂಸಿ ಅಧ್ಯಕ್ಷ ಹನಮರಡ್ಡಿ ಹಂಗನಕಟ್ಟಿ, ಗಣ್ಯರಾದ ಅಮ್ಜದ್ ಪಟೇಲ್, ಕಾಟನ್ಪಾಶಾ, ಚನ್ನಮ್ಮ, ರಾಮಣ್ಣ ಹದ್ದಿನ, ಮುತ್ತುರಾಜ ಕುಷ್ಟಗಿ, ವೆಂಕನಗೌಡ ಹಿರೇಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿಭಾಗೀಯ ತಾಂತ್ರಿಕ ಶಿಲ್ಪಿ ಎನ್.ಬಿ. ಗೌಡಗೇರಿ ಸ್ವಾಗತಿಸಿದರು. ಸಿ.ವಿ. ಜಡಿಯವರ ನಿರೂಪಿಸಿದರು. ದೇವಾನಂದ ಬಿರಾದಾರ ವಂದಿಸಿದರು. ರಾಮಚಂದ್ರಪ್ಪ ಉಪ್ಪಾರ ತಂಡದವರು ನಾಡಗೀತೆ, ರೈತಗೀತೆ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಎರಡು ಎಸಿ ಸ್ಲೀಪರ್ ಸಹಿತ ಒಟ್ಟು 20 ನೂತನ ಬಸ್ಗಳನ್ನು ಸಾರಿಗೆ ಸಚಿವರು ಲೋಕಾರ್ಪಣೆಗೊಳಿಸಿದರು.
(Release ID 646)