ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
General02-ಫೆಬ್ರವರಿ, 2018 17:10 IST

ಬರುವ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಕಾಲೇಜು ಪ್ರಾರಂಭ- ಬಸವರಾಜ ರಾಯರಡ್ಡಿ
ಕೊಪ್ಪಳ ಫೆ. 02 (ಕರ್ನಾಟಕ ವಾರ್ತೆ): ಮುಂಬರುವ ಶೈಕ್ಷಣಿಕ ವರ್ಷದಿಂದ ತಳಕಲ್ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಕೋರ್ಸ್ ಆರಂಭವಾಗಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಯಲಬುರ್ಗಾ ತಾಲೂಕು ತಳಕಲ್ನಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ಕಾಮಗಾರಿಯ ಸ್ಥಳಕ್ಕೆ ಶುಕ್ರವಾರದಂದು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಳಕಲ್ನಲ್ಲಿ 32 ಎಕರೆ ವಿಸ್ತಾರದಲ್ಲಿ ಒಟ್ಟಾರೆ 180 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಇಂಜಿನಿಯರಿಂಗ್ ಕಾಲೇಜು ಸರ್ಕಾರಿ ಕಾಲೇಜುಗಳ ಪೈಕಿ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಅತ್ಯುತ್ತಮ ಹಾಗೂ ಮಾದರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆಗಲಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಬರುವ ಶೈಕ್ಷಣಿಕ ವರ್ಷದಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ಕೋರ್ಸ್ ತರಗತಿಗಳು ಪ್ರಾರಂಭವಾಗಲಿವೆ. ಅದೇ ರೀತಿ ಗಂಗಾವತಿಯಲ್ಲಿಯೂ ಕೂಡ ಬರುವ ಶೈಕ್ಷಣಿಕ ವರ್ಷದಿಂದ ತರಗತಿಗಳು ಪ್ರಾರಂಭವಾಗಲಿವೆ. ಈಗಾಗಲೆ ತಳಕಲ್ ಇಂಜಿನಿಯರಿಂಗ್ ಕಾಲೇಜಿಗೆ ಪ್ರಾಂಶುಪಾಲರನ್ನಾಗಿ ಡಾ. ವಿರುಪಾಕ್ಷಪ್ಪ ಬಾಗೋಡಿ ಅವರನ್ನು ಹಾಗೂ ಗಂಗಾವತಿ ಇಂಜಿನಿಯರಿಂಗ್ ಕಾಲೇಜಿಗೆ ಡಾ. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ತಳಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರತಿ ವರ್ಷ 1000 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗುವುದು. ತಲಾ 17 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಒದಗಿಸಲಾಗಿದ್ದು, ವಿಶೇಷವೆಂದರೆ ಹಾಸ್ಟೆಲ್ ಕೊಠಡಿಗಳು ಬಾತ್ರೂಂ ಹಾಗೂ ಶೌಚಗೃಹ ಸಹಿತ ಇರಲಿವೆ. ಅತ್ಯಂತ ಸುಸಜ್ಜಿತ ಕೊಠಡಿಗಳನ್ನಾಗಿ ರೂಪಿಸಲು ಯೋಜನೆ ಕೈಗೊಳ್ಳಲಾಗಿದೆ. ಬೋಧಕರ ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ಪ್ರತ್ಯೇಕವಾಗಿ ಅತ್ಯಂತ ಅಚ್ಚುಕಟ್ಟಾದ ವಸತಿ ಗೃಹಗಳು ನಿರ್ಮಾಣವಾಗುತ್ತಿವೆ. ಇಂಜಿನಿಯರಿಂಗ್ ಕಾಲೇಜು ಮುಖ್ಯ ಕಟ್ಟಡ, ಕಾರ್ಯಗಾರ, ವಿದ್ಯಾರ್ಥಿನಿಲಯಗಳು, ವಸತಿ ಗೃಹ, ರಸ್ತೆ, ಚರಂಡಿ, ವಿದ್ಯುತ್, ಸಮರ್ಪಕ ನೀರು ಪೂರೈಕೆ ಸೇರಿದಂತೆ ಅತ್ಯುತ್ತಮ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ಕಾಲೇಜು ಕಟ್ಟಡ ಕಾಮಗಾರಿಯ ಜೊತೆಗೆ ಕಾಲೇಜು ಕ್ಯಾಂಪಸ್ ಹಸಿರುಮಯವಾಗಿಸಲಾಗುತ್ತಿದ್ದು, ಕಟ್ಟಡದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ ಮೇಲ್ಛಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸಿ, ವಿದ್ಯುತ್ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಕಾಲೇಜು ಕಟ್ಟಡದ ಜೊತೆಗೆ 16 ಕೋಟಿ ರೂ. ವೆಚ್ಚದಲ್ಲಿ ಬುದ್ಧ ಬಸವ ಅಂಬೇಡ್ಕರ್ ಸಭಾಂಗಣ ನಿರ್ಮಿಸಲಾಗುವುದು. 9 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ಕೂಡ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು. ಇಂಜಿನಿಯರಿಂಗ್ ಪಿಜಿ ಕೋರ್ಸ್ ಮಂಜೂರು : ತಳಕಲ್ನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದ ನಿರ್ಮಾಣ ಪೂರ್ಣಗೊಳಿಸಿ, ಸರ್ಕಾರವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹಸ್ತಾಂತರ ಮಾಡಲಿದೆ. ತಳಕಲ್ ಕಾಲೇಜಿಗೆ ಈಗಾಗಲೆ ವಿಟಿಯು ವತಿಯಿಂದ ಇಂಜಿನಿಯರಿಂಗ್ಗೆ ಸಂಬಂಧಿಸಿದ 04 ಪಿಜಿ ಕೋರ್ಸ್ಗಳನ್ನು ಮಂಜೂರು ಮಾಡಲಾಗಿದೆ. ಮಾಸ್ಟರ್ ಆಫ್ ಕಂಪ್ಯೂಟರ್ ಸೈನ್, ಮಾಸ್ಟರ್ ಇನ್ ವೆರಿ ಲಾರ್ಜ್ ಸ್ಕೇಲ್ ಇಂಟಿಗ್ರೇಷನ್ (ಇಲೆಕ್ಟ್ರಾನಿಕ್ ಕೋರ್ಸ್), ಮಾಸ್ಟರ್ ಆಫ್ ಟ್ರಾನ್ಸ್ಪೋರ್ಟೇಷನ್, ಮಾಸ್ಟರ್ ಆಪ್ ಕನ್ಸ್ಟ್ರಕ್ಷನ್ ಇಂಜಿನಿಯರಿಂಗ್ ಕೋರ್ಸ್ಗಳು ಮಂಜೂರಾಗಿವೆ. ಸರ್ಕಾರಿ ಇಂಜಿನಿಯರಿಂಗ್ ಪಿಜಿ ವ್ಯಾಸಂಗ ಕರ್ನಾಟಕ ರಾಜ್ಯದಲ್ಲಿ ಕೇವಲ ಮೂರು ಕಡೆ ಮಾತ್ರ ಇದ್ದು, ತಳಕಲ್ಗೆ ಮಂಜೂರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕೌಶಲ್ಯ ತರಬೇತಿ ಕೇಂದ್ರ : ತಳಕಲ್ ಇಂಜಿನಿಯರಿಂಗ್ ಕಾಲೇಜಿಗೆ ಹೊಂದಿಕೊಂಡಂತೆ, ಕೌಶಲ್ಯ ತರಬೇತಿ ಕೇಂದ್ರವನ್ನು ಮಂಜೂರು ಮಾಡಲಾಗಿದ್ದು, ಇದಕ್ಕಾಗಿ 80 ಕೋಟಿ ರೂ. ಅನುದಾನ ಒದಗಿಸಲಾಗಿದೆ. ನಬಾರ್ಡ್ ಹಾಗೂ ಹೆಚ್ಕೆಆರ್ಡಿಬಿ ವತಿಯಿಂದ ಅನುದಾನವನ್ನು ನೀಡಲಾಗುತ್ತಿದೆ. ಇಂಜಿನಿಯರಿಂಗ್ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡುವುದರಿಂದ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಸಹಕಾರಿಯಾಗಲಿದೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಳಕ್ಕೆ ಪೂರಕವಾಗಲಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಗದಗ-ವಾಡಿ ರೈಲ್ವೆ ಯೋಜನೆ ಸೇರಿದಂತೆ ಅಭಿವೃದ್ಧಿಯ ಯೋಜನೆಗಳು ಬರುವ 10 ವರ್ಷದೊಳಗೆ ಸಾಕಾರಗೊಂಡಲ್ಲಿ, ಇದೊಂದು ಮಾದರಿ ಕ್ಷೇತ್ರವಾಗಲಿದೆ ಎಂದು ಬಸವರಾಜ ರಾಯರಡ್ಡಿ ಅವರು ಹೇಳಿದರು. ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ, ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೋರಿ, ತಾಂತ್ರಿಕ ಶಿಕ್ಷಣ ನಿರ್ದೇಶಕ ಡಾ. ಹೆಚ್.ಯು. ತಳವಾರ, ವಿಟಿಯು ಸಿಂಡಿಕೇಟ್ ಸದಸ್ಯ ಸತ್ಯನಾರಾಯಣ, ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಪೂರ್ವದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್ ಅವರು ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯ ವಿವಿಧ ಹಂತಗಳು ಹಾಗೂ ವೈಶಿಷ್ಟ್ಯಗಳನ್ನು ಪವರ್ ಪಾಯಿಂಟ್ ಮೂಲಕ ವಿವರಿಸಿದರು.
(Release ID 651)